ADVERTISEMENT

ಡೈಮಂಡ್ ಲೀಗ್ | ನೀರಜ್ ಚೋಪ್ರಾ, ಶ್ರೀಶಂಕರ್ ಮೇಲೆ ಭರವಸೆ

ಪಿಟಿಐ
Published 29 ಜೂನ್ 2023, 16:24 IST
Last Updated 29 ಜೂನ್ 2023, 16:24 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಲಾಸೆನ್ : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಶುಕ್ರವಾರ ಆರಂಭವಾಗಲಿರುವ ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 

ಗಾಯದ ಸಮಸ್ಯೆಯಿಂದ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದ ನೀರಜ್ ಅವರಿಗೆ ಪುನರಾಗಮನದ ಕೂಟವಾಗಲಿದೆ. 25 ವರ್ಷದ ನೀರಜ್ ಹೋದ ತಿಂಗಳು ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಮೊದಲ ಚರಣದಲ್ಲಿ 88.67 ಮೀಟರ್ ಜಾವೆಲಿನ್ ಥ್ರೋ ಮಾಡಿದ್ದರು. ಅದು ಅವರ ವೃತ್ತಿಜೀವನದ ನಾಲ್ಕನೇ  ಶ್ರೇಷ್ಠ ಥ್ರೋ ಆಗಿತ್ತು. ಅದರ ನಂತರ ಮಾಂಸಖಂಡ ಬಿಗಿತದ ಸಮಸ್ಯೆಯಿಂದ ಬಳಲಿದ್ದರು.

ಜೂನ್ 4ರಂದು ನೆದರ್ಲೆಂಡ್ಸ್‌ನ ಹೆಂಗೆಲೊದಲ್ಲಿ ನಡೆದ ಎಫ್‌ಬಿಕೆ ಗೇಮ್ಸ್ ಹಾಗೂ ಫಿನ್ಲೆಂಡ್‌ನಲ್ಲಿ ಜೂನ್ 13ರಂದು ನಡೆದ ಪಾವು ನುರ್ಮಿ ಗೇಮ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಡೈಮಂಡ್ ಲೀಗ್ ಕೂಟದ ಯಾವುದೇ ಹಂತವನ್ನು ತಪ್ಪಿಸಿಕೊಳ್ಳದಿರಲು ನೀರಜ್ ನಿರ್ಧರಿಸಿದ್ದಾರೆ. ಆದ್ದರಿಂದ ಲಾಸೆನ್‌ಗೆ ಮರಳಿದ್ದಾರೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌ ಚೋಪ್ರಾಗೆ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಕಣದಲ್ಲಿ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೇಚ್, ಗ್ರೆನೆಡಾದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್, ಫಿನ್ಲೆಂಡ್‌ನ ಒಲಿವರ್ ಹಿಲ್ಯಾಂಡರ್,  ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ಕೆಶಾರ್ನ್ ವಾಲ್ಕಾಟ್ ಮತ್ತು ಜರ್ಮನಿಯ ಜೂಲಿಯನ್ ವೇಬರ್ ಅವರು ಇಲ್ಲಿಯೂ ಕಣದಲ್ಲಿದ್ದಾರೆ.

ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ ಎಂಟು ಪಾಯಿಂಟ್‌ ಗಳಿಸಿರುವ ನೀರಜ್ ಅಗ್ರಸ್ಥಾನದಲ್ಲಿದ್ದಾರೆ. ವಾಡ್ಲೇಚ್ ಏಳು ಅಂಕ ಗಳಿಸಿ ಎರಡನೇ ಮತ್ತು ಪೀಟರ್ಸ್ ಆರು ಅಂಕಗಳೊಂದಿಗೆ ಮೂರನೇ ಸ್ಥಾನಗಳಲ್ಲಿದ್ದಾರೆ.

ಜುಲೈ 21 ರಂದು ಮೊರಾಕ್ಕೊ ಮತ್ತು ಆಗಸ್ಟ್ 31ರಂದು ಜೂರಿಚ್‌ನಲ್ಲಿ ಡೈಮಂಡ್ ಲೀಗ್ ಲೆಗ್‌ಗಳು ಆಯೋಜನೆಗೊಂಡಿವೆ. ಸೆಪ್ಟೆಂಬರ್ 16 ಮತ್ತು 17ರಂದು ಅಮೆರಿಕದ ಯುಗೆನ್‌ನಲ್ಲಿ ಡೈಮಂಡ್ ಲೀಗ್ ಗ್ರ್ಯಾಂಡ್ ಫೈನಲ್ ನಡೆಯಲಿದೆ.

ಭಾರತದ ಭರವಸೆಯ ಲಾಂಗ್‌ ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಲಾಸೆನ್ ಕಣದಲ್ಲಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದಿದ್ದ ಕೂಟದಲ್ಲಿ ಅವರು 8.09 ಮೀಟರ್‌ ದೂರ ಜಿಗಿತದ ಸಾಧನೆ ಮಾಡಿದ್ದರು. ಮೂರನೇ ಸ್ಥಾನ ಪಡೆದಿದ್ದರು. 24 ವರ್ಷದ ಶ್ರೀಶಂಕರ್ ತಮ್ಮ ಜಿಗಿತವನ್ನು ಮತ್ತಷ್ಟು ಉತ್ತಮಗೊಳಿಸುವ ಛಲದಲ್ಲಿದ್ದಾರೆ. ಅವರದ್ದು 8.41 ಮೀಟರ್ಸ್ ದೂರ ಜಿಗಿತದ  ವೈಯಕ್ತಿಕ ದಾಖಲೆ ಇದೆ.

ಮುರಳಿ ಶ್ರೀಶಂಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.