ADVERTISEMENT

ಹಬಾರ್ಡ್‌ ಮೊದಲ ಲಿಂಗಪರಿವರ್ತಿತ ಒಲಿಂಪಿಯನ್

ಏಜೆನ್ಸೀಸ್
Published 21 ಜೂನ್ 2021, 12:15 IST
Last Updated 21 ಜೂನ್ 2021, 12:15 IST
ಲಾರೆಲ್ ಹಬಾರ್ಡ್‌ -ರಾಯಿಟರ್ಸ್ ಚಿತ್ರ
ಲಾರೆಲ್ ಹಬಾರ್ಡ್‌ -ರಾಯಿಟರ್ಸ್ ಚಿತ್ರ   

ವೆಲಿಂಗ್ಟನ್: ನ್ಯೂಜಿಲೆಂಡ್‌ನ ವೇಟ್‌ಲಿಫ್ಟರ್ ಲಾರೆಲ್ ಹಬಾರ್ಡ್‌ ಅವರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಮೊದಲ ಲಿಂಗಪರಿವರ್ತಿತ ಕ್ರೀಡಾಪಟು ಆಗಲಿದ್ದಾರೆ. ಅತ್ಯಂತ ಸೂಕ್ಷ್ಮ ಎನಿಸಿದ್ದ ಹಾಗೂ ಗೊಂದಲದಿಂದ ಕೂಡಿದ್ದ ಈ ವಿಷಯದ ಬಗ್ಗೆ ನ್ಯೂಜಿಲೆಂಡ್‌ ಅಧಿಕಾರಿಗಳು ಸೋಮವಾರ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.

43 ವರ್ಷದ ಹಬಾರ್ಡ್‌ 30ನೇ ವಯಸ್ಸಿನಲ್ಲಿ ಲಿಂಗಪರಿವರ್ತನೆ ಮಾಡಿಕೊಂಡು ಪುರುಷ ಅಥ್ಲೀಟ್‌ ಆಗಿದ್ದಾರೆ. ಲಿಂಗಪರಿವರ್ತಿತ ಸ್ಪರ್ಧಿಗೆ ಇರಬೇಕಾದ ನಿರ್ದಿಷ್ಟ ಅರ್ಹತೆಗಳನ್ನು ಅವರು ಗಳಿಸಿದ್ದಾರೆ ಎಂದು ನ್ಯೂಜಿಲೆಂಡ್ ಒಲಿಂಪಿಕ್ ಸಮಿತಿ ಮುಖ್ಯಸ್ಥ ಕೆರೇನ್ ಸ್ಮಿತ್ ತಿಳಿಸಿದ್ದಾರೆ.

ಪುರುಷ ಕ್ರೀಡಾಪಟುವಾಗಿ ಭಾರ ಎತ್ತಿದ ಹಬಾರ್ಡ್ ನಂತರ ಮಹಿಳೆಯಂತೆಯೂ ಭಾಗವಹಿಸಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಗದಿ ಮಾಡಿದ ಟೆಸ್ಟೊಸ್ಟೆರಾನ್ ಮಟ್ಟವೂ ಅವರಲ್ಲಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 87 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು 16ನೇ ಸ್ಥಾನದಲ್ಲಿದ್ದಾರೆ ಎಂದು ಕೆರೇನ್ ಸ್ಮಿತ್ ಹೇಳಿದರು.

ADVERTISEMENT

ಪುರುಷನಾದ ಕುಮಿ ಯೊಕೊಯಾಮ

ಟೋಕಿಯೊ (ಎಎಫ್‌ಪಿ): ಜಪಾನ್‌ನ ಮಹಿಳಾ ಫುಟ್‌ಬಾಲ್ ಪಟು, ವಿಶ್ವಕಪ್‌ನಲ್ಲಿ ಮಿಂಚಿದ್ದ ಕುಮಿ ಯೊಕೊಯಾಮ ಲಿಂಗಪರಿವರ್ತನೆ ಮಾಡಿಕೊಂಡು ಪುರುಷನಾಗಿದ್ದಾರೆ. 2019ರ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದ ಅವರು ಸದ್ಯ ಅಮೆರಿಕ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ಲೀಗ್‌ನಲ್ಲಿ ವಾಷಿಂಗ್ಟನ್ ಸ್ಪಿರಿಟ್ ತಂಡದ ಪರ ಆಡುತ್ತಿದ್ದಾರೆ. ಇಲ್ಲಿರುವುದರಿಂದಾಗಿ ಲಿಂಗ‍‍ಪರಿವರ್ತನೆಗೆ ಒಳಗಾಗುವುದು ಸುಲಭವಾಗಿದೆ ಎಂದು ಅವರು ಹೇಳಿದ್ದಾರೆ.

‘ಜಪಾನ್‌ನಲ್ಲಿ ಲಿಂಗಪರಿವರ್ತನೆ ಕಾನೂನು ಕಠಿಣವಾಗಿದೆ. ಆದರೆ ಅಮೆರಿಕ ಮತ್ತು ಜರ್ಮನಿಯಲ್ಲಿ ಈ ಸಮಸ್ಯೆ ಇಲ್ಲ. ಸಹ ಆಟಗಾರರ ಬಳಿ ಮೊದಲು ಈ ವಿಷಯ ಹೇಳಿರಲಿಲ್ಲ. ವಿಷಯ ಗೊತ್ತಾದ ನಂತರ ಎಲ್ಲರೂ ನನ್ನನ್ನು ಪ್ರೋತ್ಸಾಹಿಸಿದರು. ಅಡಗಿಸಿಡುವ ಅಗತ್ಯವಿಲ್ಲ ಎಂದರು. ಆದ್ದರಿಂದ ಈಗ ಧೈರ್ಯವಾಗಿ ಬಹಿರಂಗ ಮಾಡಿದ್ದೇನೆ’ ಎಂದು ಕುಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.