ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: 'ಕಾಳೇಂಗಡ, ತೀತಮಾಡ, ಇಟ್ಟಿರ' ಎಂಟರ ಘಟ್ಟಕ್ಕೆ

ಕಂಬಿರಂಡ ತಂಡ ಸಡನ್ ಡೆತ್ನಲ್ಲಿ ಗೆಲುವು ಪಡೆದು ಎಂಟರ ಘಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:14 IST
Last Updated 6 ಮೇ 2019, 13:14 IST
ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಇಟ್ಟಿರ ತಂಡವು ಪುಚ್ಚಿಮಾಡ ತಂಡವನ್ನು ಮಣಿಸಿತು
ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಇಟ್ಟಿರ ತಂಡವು ಪುಚ್ಚಿಮಾಡ ತಂಡವನ್ನು ಮಣಿಸಿತು   

ವಿರಾಜಪೇಟೆ : ಸಮೀಪದ ಕಾಕೋಟುಪರಂಬುವಿನಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಸೋಮವಾರದ ಪಂದ್ಯಾಟದಲ್ಲಿ ಕಾಳೇಂಗಡ, ತೀತಮಾಡ, ಕಂಬಿರಂಡ ಹಾಗೂ ಇಟ್ಟಿರ ತಂಡಗಳು ಜಯ ಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.

ದಿನದ ಮೊದಲ ಪಂದ್ಯದಲ್ಲಿ ಕಾಳೇಂಗಡ ತಂಡವು 3-2 ಗೋಲುಗಳಿಂದ ಕಡೇಮಾಡ ತಂಡವನ್ನು ಮಣಿಸಿ ಮುನ್ನಡೆಯಿತು. ಆಟದ 3ನೇ ನಿಮಿಷದಲ್ಲಿ ಕಡೆಮಾಡ ತಂಡದ ಕಾವೇರಪ್ಪ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ ಕಾಳೇಂಗಡ ತಂಡದ ಸುಬ್ಬಯ್ಯ 14 ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮವಾಗುವಂತೆ ಮಾಡಿದರೆ, 23 ನೇ ನಿಮಿಷದಲ್ಲಿ ಅದೇ ತಂಡದ ಪವನ್ ಮತ್ತೊಂದು ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು.

ಪ್ರತಿದಾಳಿ ಆರಂಭಿಸಿದ ಕಡೇಮಾಡ ತಂಡದ ಆಟಗಾರ ಚರ್ಮಣ್ಣ ಅವರು 24 ನೇ ನಿಮಿಷದಲ್ಲಿ ಗೋಲು ಬಾರಿಸಿ ಮತ್ತೆ ಪಂದ್ಯ ಸಮವಾಗುವಂತೆ ಮಾಡಿದರು. ಬಳಿಕ 29ನೇ ನಿಮಿಷದಲ್ಲಿ ಕಾಳೇಂಗಡ ತಂಡದ ಪವನ್ ಪಂದ್ಯದಲ್ಲಿ ತನ್ನ ಎರಡನೇ ಗೋಲು ದಾಖಲಿಸುವ ಮೂಲಕ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.

ADVERTISEMENT

ತೀತಮಾಡ ತಂಡವು 2-1 ಗೋಲುಗಳಿಂದ ಐನಂಡ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ತೀತಮಾಡ ತಂಡದ ಪರ ಬೋಪಣ್ಣ 26 ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದಿತ್ತರೆ, ಕಾಳಪ್ಪ 34ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು ಹೆಚ್ಚಿಸಿದರು. ಐನಂಡ ತಂಡದ ಪರ ಪೂವಣ್ಣ 34 ನೇ ನಿಮಿಷದಲ್ಲಿ ಗೋಲು ದಾಖಲಿಸಿ ಉತ್ತಮ ಪ್ರತಿರೋಧವನ್ನು ತೋರಿದರೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ.

ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಕಂಬಿರಂಡ ತಂಡವು 6-5 ಗೋಲುಗಳಿಂದ ಪೆಮ್ಮಂಡ ತಂಡವನ್ನು ಮಣಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿತು. ಪಂದ್ಯದ 4ನೇ ನಿಮಿಷದಲ್ಲಿ ಪೆಮ್ಮಂಡ ತಂಡದ ಸೋಮಣ್ಣ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ 21ನೇ ನಿಮಿಷದಲ್ಲಿ ಕಂಬಿರಂಡ ತಂಡದ ರಮೇಶ್ ಗೋಲು ದಾಖಲಿಸುವ ಮೂಲಕ ಪಂದ್ಯ ಸಮಬಲವಾಗುವಂತೆ ಮಾಡಿದರು. ಇದರಿಂದಾಗಿ ನಿಗದಿತ ಅವಧಿಯ ಆಟದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದಂತಾಯಿತು.

ಬಳಿಕ ನಡೆದ ಟೈಬ್ರೇಕರ್ನಲ್ಲಿ ಕಂಬಿರಂಡ ತಂಡದ ಪರ ಯೋಗೇಶ್, ಮಯೂರ್, ಬೋಪಣ್ಣ ಹಾಗೂ ಸತೀಶ್ ಗೋಲು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಪೆಮ್ಮಂಡ ತಂಡದ ಪರ ಸೋಮಣ್ಣ, ಚರಣ್, ಕರಣ್ ಹಾಗೂ ಪಿ.ಎ. ಸೋಮಣ್ಣ ಗೋಲು ದಾಖಲಿಸಿದ್ದರಿಂದ ಪಂದ್ಯ ಮತ್ತೆ ಸಮಬಲವಾಯಿತು. ಫಲಿತಾಂಶಕ್ಕಾಗಿ ಸಡನ್ ಡೆತ್‌ ನಿಯಮದನ್ವಯ ನಡೆದ ಹೋರಾಟದಲ್ಲಿ ಕಂಬಿರಂಡ ತಂಡದ ಆಟಗಾರ ಬೋಪಣ್ಣ ಗೋಲು ದಾಖಲಿಸುವುದರ ಮೂಲಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವಂತೆ ಮಾಡಿದರು.

ದಿನದ ಕೊನೆಯ ಪಂದ್ಯದಲ್ಲಿ ಇಟ್ಟಿರ ತಂಡವು 1-0 ಗೋಲಿನಿಂದ ಪುಚ್ಚಿಮಾಡ ತಂಡವನ್ನು ಮಣಿಸುವ ಮೂಲಕ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಇಟ್ಟಿರ ತಂಡದ ಪೂವಪ್ಪ 26ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿನ ರೂವಾರಿಯೆನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.