ADVERTISEMENT

ಫುಟ್‌ಬಾಲ್‌: ಪ್ರಶಸ್ತಿಗೆ 30 ತಂಡಗಳ ಹಣಾಹಣಿ

‘ಮ್ಯಾನ್ಸ್‌ ಕಾಂಪೌಂಡ್‌ ಕ್ಲಬ್’ನ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:12 IST
Last Updated 25 ಮೇ 2019, 13:12 IST
ಮಡಿಕೇರಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ‘ಮ್ಯಾನ್ಸ್‌ ಕಾಂಪೌಂಡ್‌ ಕ್ಲಬ್’ ಆಶ್ರಯದಲ್ಲಿ ನಡೆದ ಫುಟ್‌ಬಾಲ್‌ ಪಂದ್ಯ
ಮಡಿಕೇರಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ‘ಮ್ಯಾನ್ಸ್‌ ಕಾಂಪೌಂಡ್‌ ಕ್ಲಬ್’ ಆಶ್ರಯದಲ್ಲಿ ನಡೆದ ಫುಟ್‌ಬಾಲ್‌ ಪಂದ್ಯ   

ಮಡಿಕೇರಿ: ‘ಮ್ಯಾನ್ಸ್‌ ಕಾಂಪೌಂಡ್‌ ಕ್ಲಬ್’ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಳಿಸಿದ್ದು ಅದರ ಅಂಗವಾಗಿ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಫುಟ್‌ಬಾಲ್‌ ಟೂರ್ನಿಗೆ ಶನಿವಾರ ಚಾಲನೆ ದೊರೆಯಿತು.

ಜೂನಿಯರ್ ಕಾಲೇಜು ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್ ಸಿಂಗ್ ಟೂರ್ನಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಕ್ರೀಡೆಗೆ ಇನ್ನಷ್ಟು ಉತ್ತೇಜನ ನೀಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟು ಪ್ರಶಸ್ತಿ ಗಳಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ಕ್ರೀಡೆಯಲ್ಲಿ ಸೋಲು–ಗೆಲುವುಗಳನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಯುವಕರು ತಮ್ಮನ್ನು ತಾವು ಕ್ರೀಡಾ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೂನಿಯರ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಮಾತನಾಡಿ, 1968ರಲ್ಲಿ ಆರಂಭವಾದ ಕ್ಲಬ್ 2018ಕ್ಕೆ 50 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ನೆನಪಿಗಾಗಿ ಜಿಲ್ಲಾಮಟ್ಟದ ಟೂರ್ನಿ ಆಯೋಜಿಸಲು ಸಾರ್ವಜನಿಕರ ಸಹಕಾರ ದೊರೆತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಟೂರ್ನಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಗೆ ಅವಕಾಶ ಕಲ್ಪಿಸದೇ ಪಾರದರ್ಶಕತೆ ಇರಬೇಕು; ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ನುಡಿದರು.

ಪಂದ್ಯಾವಳಿಯಲ್ಲಿ ಸಾಕಷ್ಟು ತಂಡಗಳು ಆಗಮಿಸಿದ್ದರೂ ಮೊದಲು ನೋಂದಣಿ ಮಾಡಿಕೊಂಡ 30 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಹಿರಿಯ ಆಟಗಾರ ಎನ್.ಕೆ. ರವೀಂದ್ರ ಮಾತನಾಡಿ, ನಮ್ಮ ಕ್ಲಬ್‌ನಿಂದ ತರಬೇತಿ ಪಡೆದ ಸಾಕಷ್ಟು ಮಂದಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಟ್ಟು 30 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

ಕ್ಲಬ್‌ ಕಾರ್ಯದರ್ಶಿ ಪಿ. ಉಮೇಶ್ ಕುಮಾರ್, ಖಜಾಂಚಿ ಪೀಟರ್, ಹಿರಿಯ ಆಟಗಾರ ಎನ್.ಕೆ. ರವೀಂದ್ರ, ಸದಸ್ಯ ಬಿ.ಜೆ. ಮನೋಜ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.