ADVERTISEMENT

ಚೆಸ್‌: ಅಗ್ರಸ್ಥಾನದಲ್ಲಿ ನಿಹಾಲ್‌, ಮಥಾಯಸ್‌

ಪಿಟಿಐ
Published 12 ಸೆಪ್ಟೆಂಬರ್ 2025, 16:33 IST
Last Updated 12 ಸೆಪ್ಟೆಂಬರ್ 2025, 16:33 IST
   

ಐಲ್‌ ಆಫ್‌ ಮ್ಯಾನ್ : ಭಾರತದ ನಿಹಾಲ್ ಸರಿನ್ ಮತ್ತು ಜರ್ಮನಿಯ ಬ್ಲೂಬಾಮ್ ಮಥಾಯಸ್‌ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್‌ ಓಪನ್ ವಿಭಾಗದ ಎಂಟನೇ ಸುತ್ತಿನ ನಂತರ ತಲಾ ಆರು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ರಷ್ಯಾದ ಕ್ಯಾಥರಿನಾ ಲಾಗ್ನೊ (6.5) ಶುಕ್ರವಾರ ಅಗ್ರಸ್ಥಾನಕ್ಕೇರಿದರು.

ಕೇರಳದ ಗ್ರ್ಯಾಂಡ್‌ಮಾಸ್ಟರ್ ನಿಹಾಲ್ ಮತ್ತು ಮಥಾಯಸ್‌ ಮೊದಲ ಬೋರ್ಡ್‌ನಲ್ಲಿ ನಡೆದ ತಮ್ಮ ಪಂದ್ಯವನ್ನು 21 ನಡೆಗಳ ನಂತರ ಡ್ರಾ ಮಾಡಿಕೊಂಡರು. ಫ್ರಾನ್ಸ್‌ನ ಅಲಿರೇಝಾ ಫಿರೋಜ, ಹ್ಯಾನ್ಸ್‌ ನೀಮನ್, ಅಮೆರಿಕದ ಅಭಿಮನ್ಯು ಮಿಶ್ರಾ ಸೇರಿ ಎಂಟು ಮಂದಿ ಆಟಗಾರರು ತಲಾ ಐದೂವರೆ ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅಭಿಮನ್ಯು ಮಿಶ್ರಾ, ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಡ್ರಾ ಮಾಡಿಕೊಂಡರು.

ಪ್ರಜ್ಞಾನಂದ ಮತ್ತು ಅರ್ಜುನ್ ಇರಿಗೇಶಿ ತಮ್ಮ ಎದುರಾಳಿಗಳ ವಿರುದ್ಧ ಡ್ರಾ ಮಾಡಿಕೊಂಡಿದ್ದು ತಲಾ 5 ಪಾಯಿಂಟ್ಸ್‌ ಹೊಂದಿದ್ದಾರೆ.

ADVERTISEMENT

ಮಹಿಳೆಯರ ವಿಭಾಗದಲ್ಲಿ ಲಾಗ್ನೊ, ಉಕ್ರೇನ್‌ನ ಮರಿಯಾ ಮುಝಿಚುಕ್ (5) ಅವರನ್ನು ಸೋಲಿಸಿದರು. ಏಳನೇ ಸುತ್ತಿನ ನಂತರ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿದ್ದ ವೈಶಾಲಿ ಆರ್‌ ಅವರು ಶುಕ್ರವಾರ ಬಿಬಿಸಾರ ಅಸ್ಸೌಬಯೇವಾ ಅವರಿಗೆ ಮಣಿದರು. ಬಿಬಿಸಾರ, ಚೀನಾದ ಯುಕ್ಸಿನ್ ಸಾಂಗ್‌, ವೈಶಾಲಿ ತಲಾ ಆರು ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.