ADVERTISEMENT

ಬೋಸ್ಫೊರಸ್ ಬಾಕ್ಸಿಂಗ್ ಟೂರ್ನಿ: ನಿಖತ್ ಜರೀನ್, ಗೌರವ್‌ ಸೆಮಿಫೈನಲ್‌ಗೆ ಲಗ್ಗೆ

ಬಾಕ್ಸಿಂಗ್‌: ಮಾಜಿ ವಿಶ್ವಚಾಂಪಿಯನ್ ನಜೀಮ್ ಕೈಜಬೆಗೆ ಆಘಾತ; ಸೋಲುಂಡ ಅಯ್ಕೊಲ್ ಮಿಜಾನ್‌

ಪಿಟಿಐ
Published 19 ಮಾರ್ಚ್ 2021, 11:20 IST
Last Updated 19 ಮಾರ್ಚ್ 2021, 11:20 IST
ಅಯ್ಕೊಲ್ ಮಿಜಾನ್ ಎದುರು ಪಾಯಿಂಟ್ ಗಳಿಸಿದ ಗೌರವ್ ಸೋಳಂಕಿ –ಪಿಟಿಐ ಚಿತ್ರ
ಅಯ್ಕೊಲ್ ಮಿಜಾನ್ ಎದುರು ಪಾಯಿಂಟ್ ಗಳಿಸಿದ ಗೌರವ್ ಸೋಳಂಕಿ –ಪಿಟಿಐ ಚಿತ್ರ   

ನವದೆಹಲಿ: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 2019ರ ವಿಶ್ವ ಚಾಂಪಿಯನ್ ಪಲ್ಸೇವಾ ಎಕಟೇರಿನಾ ಎದುರು ಭರ್ಜರಿ ಜಯ ಸಾಧಿಸಿದ ಭಾರತದ ಬಾಕ್ಸರ್ ನಿಖತ್ ಜರೀನ್ ಮತ್ತೊಮ್ಮೆ ಅಮೋಘ ಪಂಚ್‌ಗಳ ಮೂಲಕ ಮಿಂಚಿದರು. ಎರಡು ಬಾರಿಯ ವಿಶ್ವ ಚಾಪಿಯನ್ ಕಜಕಸ್ತಾನದ ನಜೀಂ ಕೈಜಬೆ ವಿರುದ್ಧ ಗೆಲುವು ದಾಖಲಿಸಿದ ನಿಖತ್‌ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಬೋಸ್ಫೊರಸ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.

ಶುಕ್ರವಾರ ನಡೆದ ಮಹಿಳೆಯರ 51 ಕೆಜಿ ವಿಭಾಗದ ಬೌಟ್‌ನಲ್ಲಿ ನಿಖತ್‌ 4–1ರಿಂದ ಕೈಜಬೆ ಅವರನ್ನು ಮಣಿಸಿದರು. 2014ರಿಂದ 2016ರ ವರೆಗೆ ಕೈಜಬೆ ಇಲ್ಲಿ ಚಾಂಪಿಯನ್‌ ಆಗಿದ್ದರು.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಗೌರವ್ ಸೋಳಂಕಿ 57 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಸ್ಥಳೀಯ ಅಯ್ಕೊಲ್ ಮಿಜಾನ್‌ ಎದುರು ಗೌರವ್ ಜಯ ಗಳಿಸಿದರು. ಈ ಬೌಟ್‌ನಲ್ಲಿ ಉಭಯ ಬಾಕ್ಸರ್‌ಗಳು ಪ್ರತಿಕ್ಷಣವೂ ಜಿದ್ದಾಜಿದ್ದಾಯ ಹೋರಾಟ ಪ್ರದರ್ಶಿಸಿದರು. ಆದರೆ ತಾಂತ್ರಿಕವಾಗಿ ಪಾರಮ್ಯ ಮೆರೆದ ಸೋಳಂಕಿ 4–1ರಲ್ಲಿ ಜಯ ಸಾಧಿಸಿದರು.

ADVERTISEMENT

ಮಹಿಳಾ ವಿಭಾಗದ 57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್‌, 60 ಕೆಜಿ ವಿಭಾಗದಲ್ಲಿ ಪರ್ವೀನ್‌ ಮತ್ತು 69 ಕೆಜಿ ವಿಭಾಗದಲ್ಲಿ ಜ್ಯೋತಿ, ಕ್ವಾರ್ಟರ್‌ ಫೈನಲ್ ಬೌಟ್‌ಗಳನ್ನು ಸೋತು ಹೊರಬಿದ್ದರು. ಪುರುಷರ 63 ಕೆಜಿವಿಭಾಗದ ಬೌಟ್‌ನಲ್ಲಿ ಶಿವ ಥಾಪಾ 1–4ರಲ್ಲಿ ಟರ್ಕಿಯ ಹಕನ್ ದೋಗನ್‌ಗೆ ಮಣಿದು ನಿರಾಸೆ ಅನುಭವಿಸಿದರು.

ಜರೀನ್‌ಗೆ ನಾಲ್ಕರ ಘಟ್ಟದ ಬೌಟ್‌ನಲ್ಲೂ ಕಠಿಣ ಪೈ‍ಪೋಟಿ ಎದುರಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಟರ್ಕಿಯ ಬುಸೇನಾಜ್ ಕಕಿರೊಗ್ಲು ವಿರುದ್ಧ ಅವರು ಸೆಣಸುವರು. ಅರ್ಜೆಂಟೀನಾದ ನಿರ್ಕೊ ಕುಯಿಲೊ ಎದುರು ಗೌರವ್ ಸೋಳಂಕಿ ಕಣಕ್ಕೆ ಇಳಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.