ಬ್ಯಾಂಕಾಕ್ : ಉದಯೋನ್ಮುಖ ಮಹಿಳಾ ಬಾಕ್ಸರ್‌ಗಳಾದ ನಿಶಾ ಮತ್ತು ಮುಸ್ಕಾನ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ ರಾಹುಲ್ ಕುಂದು ಚಿನ್ನಕ್ಕೆ ಕೊರಳೊಡ್ಡಿದರು.
ಈ ವಯೋಮಿತಿಯ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್‌ಗಳು ಮೂರು ಚಿನ್ನ, ಏಳು ಬೆಳ್ಳಿ ಮತ್ತು ನಾಲ್ಕು ಕಂಚಿನೊಂದಿಗೆ 14 ಪದಕಗಳನ್ನು ತಮ್ಮದಾಗಿಸಿಕೊಂಡರು.
ಭಾರತದ 10 ಮಹಿಳಾ ಬಾಕ್ಸರ್‌ಗಳ ಪೈಕಿ 9 ಮಂದಿ ಪದಕ ಗೆದ್ದುಕೊಂಡರು. ಅದರಲ್ಲಿ ಎರಡು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚು ಸೇರಿವೆ. ಕಜಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಬಾಕ್ಸರ್‌ಗಳು ಕಣದಲ್ಲಿದ್ದರೂ ಭಾರತದ ಸ್ಪರ್ಧಿಗಳು ಅಮೋಘ ಸಾಧನೆ ಮೆರೆದರು.
54 ಕೆ.ಜಿ ವಿಭಾಗದ ಫೈನಲ್‌ನಲ್ಲಿ ನಿಶಾ 4–1ರಿಂದ ಚೀನಾದ ಸಿರುಯಿ ಯಾಂಗ್ ಅವರನ್ನು ಮಣಿಸಿದರು. ಮೊದಲೆರಡು ಸುತ್ತಿನಲ್ಲಿ ಸಮಬಲದ ಹೋರಾಟ ಕಂಡುಬಂತು. ಆದರೆ, ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ನಿಶಾ ಪ್ರಾಬಲ್ಯ ಸಾಧಿಸಿದರು.
57 ಕೆ.ಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮುಸ್ಕಾನ್ 3–2ರ ರೋಚಕ ಹೋರಾಟದಲ್ಲಿ ಕಜಕಿಸ್ತಾನದ ಅಯಾಝಾನ್ ಎರ್ಮೆಕ್ ಅವರ ಸವಾಲನ್ನು ಮೆಟ್ಟಿ ನಿಂತರು.
ಆರತಿ ಕುಮಾರಿ (75 ಕೆ.ಜಿ) ಫೈನಲ್‌ನಲ್ಲಿ ಚೀನಾದ ಟಾಂಗ್ಟಾಂಗ್ ಗು ವಿರುದ್ಧ ಸೋತರೆ, ಕೃತಿಕಾ ವಾಸನ್ (80 ಕೆ.ಜಿ) ಪ್ರಶಸ್ತಿ ಸುತ್ತಿನಲ್ಲಿ 2–3ರಿಂದ ಕಜಕಿಸ್ತಾನದ ಕುರಲಾಯ್ ಯೆಗಿನ್‌ಬೈಕಿಜಿ ಅವರಿಗೆ ಶರಣಾಗಿ ಬೆಳ್ಳಿ ತಮ್ಮದಾಗಿಸಿಕೊಂಡರು.
ಇತರ ಫೈನಲ್‌ಗಳಲ್ಲಿ ಪ್ರಾಚಿ ಟೋಕಸ್ (80+ ಕೆ.ಜಿ) ಉಜ್ಬೇಕಿಸ್ತಾನದ ಸೊಬಿರಾಖೋನ್ ಶಖೋಬಿಡಿನೋವಾ ವಿರುದ್ಧ; ವಿನಿ (60 ಕೆ.ಜಿ) ಉಜ್ಬೇಕಿಸ್ತಾನದ ಸೆವಾರಾ ಮಮಟೋವಾ ವಿರುದ್ಧ; ನಿಶಾ (65 ಕೆ.ಜಿ) ಜಪಾನ್‌ನ ಅರಿಂಡಾ ಅಕಿಮೊಟೊ ವಿರುದ್ಧ ಪರಾಭವಗೊಂಡು ಎರಡನೇ ಸ್ಥಾನ ಪಡೆದರು. ಯಶಿಕಾ (51 ಕೆ.ಜಿ) ಮತ್ತು ಆಕಾಂಕ್ಷಾ ಫಲಸ್ವಾಲ್ (70 ಕೆ.ಜಿ) ಕಂಚಿನ ಪದಕ ಗೆದ್ದರು.
ಪುರುಷರ 75 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರಾಹುಲ್ 4–1ರಿಂದ ಉಜ್ಬೇಕಿಸ್ತಾನದ ಮೊಹಮ್ಮದ್ಜೋನ್ ಯಾಕುಪ್ಪೋವೆಕ್ ಅವರನ್ನು ಮಣಿಸಿದರು.
ಮೌಸಮ್ ಸುಹಾಗ್ (65 ಕೆ.ಜಿ) ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಜಖೋಂಗಿರ್ ಜೈನಿಡಿನೋವ್ ವಿರುದ್ಧ ಸೋತರೆ, ಹೇಮಂತ್ ಸಂಗ್ವಾನ್ (90 ಕೆ.ಜಿ) ಕಜಕಿಸ್ತಾನದ ರಸುಲ್ ಅಸ್ಸಂಖಾನೊವ್ ವಿರುದ್ಧ ಪರಾಭವಗೊಂಡು ಬೆಳ್ಳಿ ತಮ್ಮದಾಗಿಸಿಕೊಂಡರು. ಶಿವಂ (55 ಕೆ.ಜಿ) ಮತ್ತು ಗೌರವ್ (85 ಕೆ.ಜಿ) ಕಂಚಿನ ಪದಕ ಜಯಿಸಿದರು.
22 ವರ್ಷದೊಳಗಿನ ವಿಭಾಗದಲ್ಲಿ ಭಾರತಕ್ಕೆ 13 ಪದಕಗಳು ಖಚಿತವಾಗಿವೆ. ಸೋಮವಾರ ಐದು ಬಾಕ್ಸರ್‌ಗಳು ಚಿನ್ನಕ್ಕಾಗಿ ಹೋರಾಟ ನಡೆಸುವರು. 19 ಮತ್ತು 22 ವರ್ಷದೊಳಗಿನವರ ವಿವಿಧ ತೂಕಮಿತಿಯ ಸ್ಪರ್ಧೆಗಳಲ್ಲಿ ಭಾರತ 40 ಮಂದಿಯನ್ನು ಕಣಕ್ಕಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.