ADVERTISEMENT

ವಿಶ್ವ ಒಲಿಂಪಿಕ್ಸ್‌ ಬಾಕ್ಸಿಂಗ್ ಅರ್ಹತಾ ಟೂರ್ನಿ: 16ರ ಸುತ್ತಿಗೆ ನಿಶಾಂತ್ ದೇವ್‌

ಪಿಟಿಐ
Published 8 ಮಾರ್ಚ್ 2024, 12:55 IST
Last Updated 8 ಮಾರ್ಚ್ 2024, 12:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬುಸ್ಟೊ ಆರ್ಸಿಝಿಯೊ (ಇಟಲಿ),: ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್‌ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಜಾರ್ಜಿಯಾದ ಮಡಿಯೇವ್ ಎಸ್ಕೆರ್‌ಖಾನ್ ಅವರನ್ನು ಸೋಲಿಸಿ 71 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.

ಗುರುವಾರ ರಾತ್ರಿ ನಡೆದ ಸೆಣಸಾಟದಲ್ಲಿ ನಿಶಾಂತ್‌ 5–0 ಒಮ್ಮತದ ತೀರ್ಪು ಪಡೆದರು.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎಂಟರ ಘಟ್ಟ ತಲುಪಿದ್ದ ಎಸ್ಕೆರ್‌ಖಾನ್‌, ಭಾರತದ ಬಾಕ್ಸರ್‌ ದಾಳಿಯ ಮುಂದೆ ಗಲಿಬಿಲಿಯಾದರು. ಎರಡನೇ ಸುತ್ತಿನಲ್ಲಿ ಅವರು ಚೇತರಿಸಿಕೊಳ್ಳಲು ಪ್ರಯತ್ನಿಸಿದರೂ, ನಿಶಾಂತ್‌ ಎದುರಾಳಿಯ ಪುನರಾಗಮನಕ್ಕೆ ಅವಕಾಶವನ್ನೇ ನೀಡಲಿಲ್ಲ.

ನಿಶಾಂತ್‌ ಅವರು ಭಾನುವಾರ 16ರ ಸುತ್ತಿನ ಹೋರಾಟ ನಡೆಸಲಿದ್ದಾರೆ.

ಇದೇ ವೇಳೆ ವಿಶ್ವ ಯುವ ಚಾಂಪಿಯನ್ ಅಂಕುಶಿತಾ ಬೋರೊ (66 ಕೆ.ಜಿ) ಮತ್ತು ರಾಷ್ಟ್ರೀಯ ಚಾಂಪಿಯನ್ ಸಂಜೀತ್ (92 ಕೆ.ಜಿ) ಅವರು ಮೊದಲ ಸುತ್ತಿನಲ್ಲೇ ಭಿನ್ನ ರೀತಿಯಲ್ಲಿ ಸೋಲನುಭವಿಸಿದರು. ಅಂಕುಶಿತಾ 2–3 ರಲ್ಲಿ ಫ್ರಾನ್ಸ್‌ನ ಸೊನ್ವಿಕೊ ಎಮಿಲಿ ಅವರಿಗೆ ಮಣಿದರೆ, ಸಂಜೀತ್‌ ಹೆಚ್ಚು ಹೋರಾಟ ತೋರದೇ ಕಜಕಸ್ತಾನದ ಐಬೆಕ್ ಒರಲ್ಬೆ ಅವರೆದುರು ಪರಾಜಯ ಕಂಡರು. ಒಟ್ಟಾರೆ ಭಾರತದ ಬಾಕ್ಸಿಂಗ್ ಪಟುಗಳ ನಿರಾಶಾದಾಯಕ ಪ್ರದರ್ಶನ ಮುಂದುವರಿದಂತಾಯಿತು.

ಈ ಟೂರ್ನಿಯಲ್ಲಿ 590 ಮಂದಿ ಬಾಕ್ಸರ್‌ಗಳು ಕಣದಲ್ಲಿದ್ದು, ಇವರಲ್ಲಿ ಒಟ್ಟು 49 ಮಂದಿಗೆ ಈ ವರ್ಷದ ಮಧ್ಯದಲ್ಲಿ ನಡೆಯುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾ ಪಡೆಯಲು ಅವಕಾಶವಿದೆ.

ಭಾರತದ ನಾಲ್ವರು ಈ ಮೊದಲೇ ಏಷ್ಯನ್‌ ಗೇಮ್ಸ್‌ನಲ್ಲಿ ತೋರಿದ ನಿರ್ವಹಣೆಯಿಂದ ಒಲಿಂಪಿಕ್ಸ್‌ಗೆ ಸ್ಥಾನ ಕಾದಿರಿಸಿದ್ದಾರೆ. ನಿಖತ್ ಜರೀನ್ (50 ಕೆ.ಜಿ), ಪ್ರೀತಿ (54 ಕೆ.ಜಿ), ಪರ್ವೀನ್ ಹೂಡ (57 ಕೆ.ಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ) ಈ ನಾಲ್ವರು.

ಎರಡನೇ ವಿಶ್ವ ಒಲಿಂಪಿಕ್‌ ಕ್ವಾಲಿಫಿಕೇಷನ್ ಟೂರ್ನಿ ಮೇ 23 ರಿಂದ ಜೂನ್ 3ರವರೆಗೆ ನಡೆಯಲಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.