ADVERTISEMENT

ಚೆಸ್‌ ಒಲಿಂಪಿಯಾಡ್‌: ಅಮೆರಿಕ ಮಣಿಸಿದ ಭಾರತ ‘ಬಿ’

ಚೆಸ್‌ ಒಲಿಂಪಿಯಾಡ್‌: ಗುಕೇಶ್‌ಗೆ ಸತತ 8ನೇ ಜಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಎಂಟನೇ ಸುತ್ತಿನಲ್ಲಿ ಆಡಿದ ಡಿ.ಹರಿಕಾ –ಪಿಟಿಐ ಚಿತ್ರ
ಎಂಟನೇ ಸುತ್ತಿನಲ್ಲಿ ಆಡಿದ ಡಿ.ಹರಿಕಾ –ಪಿಟಿಐ ಚಿತ್ರ   

ಮಹಾಬಲಿಪುರಂ: ಡಿ.ಗುಕೇಶ್‌ ಮತ್ತು ರೌನಕ್‌ ಸಾಧ್ವಾನಿ ಅವರ ಚುರುಕಿನ ಆಟದ ನೆರವಿನಿಂದ ಭಾರತ ‘ಬಿ’ ತಂಡ 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಅಮೆರಿಕ ತಂಡಕ್ಕೆ ಆಘಾತ ನೀಡಿತು.

ಯುವ ಆಟಗಾರರನ್ನು ಒಳಗೊಂಡ ಭಾರತ ‘ಬಿ’ ತಂಡ ಶನಿವಾರ ನಡೆದ ಎಂಟನೇ ಸುತ್ತಿನ ಪಂದ್ಯವನ್ನು 3–1 ಪಾಯಿಂಟ್‌ಗಳಿಂದ ಗೆದ್ದಿತು.

ಚಾಣಾಕ್ಷ ಆಟ ತೋರಿದ ಯುವ ಪ್ರತಿಭೆ ಗುಕೇಶ್‌, ವಿಶ್ವದ ಐದನೇ ರ‍್ಯಾಂಕ್‌ನ ಆಟಗಾರ ಫ್ಯಾಬಿಯಾನೊ ಕರುವಾನ ಅವರಿಗೆ ಸೋಲುಣಿಸಿದರು. ಭಾರತದ ಆಟಗಾರನಿಗೆ ಟೂರ್ನಿಯಲ್ಲಿ ದೊರೆತ ಸತತ ಎಂಟನೇ ಜಯ ಇದು.

ADVERTISEMENT

ಸಾಧ್ವಾನಿ ಅವರು ರ್‍ಯಾಂಕಿಂಗ್‌ನಲ್ಲಿ ತನಗಿಂತ ಮೇಲಿನ ಸ್ಥಾನದಲ್ಲಿರುವ ಲಿನಿಯೆರ್‌ ಡೊಮಿನಿಗ್ವೆಸ್‌ ಪೆರೆಜ್‌ ಅವರನ್ನು ಸೋಲಿಸಿದರು. ನಿಹಾಲ್‌ ಸರಿನ್‌ ಮತ್ತು ಆರ್.ಪ್ರಗ್ನಾನಂದ ಅವರು ಕ್ರಮವಾಗಿ ಲೆವೊನ್‌ ಅರೋನಿಯನ್‌ ಹಾಗೂ ವೆಸ್ಲಿ ಸೊ ಜತೆ ಡ್ರಾ ಮಾಡಿಕೊಂಡರು.

ಭಾರತ ‘ಎ’ ತಂಡ ಅರ್ಮೇನಿಯ ಎದುರು 1.5–2.5 ಪಾಯಿಂಟ್‌ಗಳಿಂದ ಮಣಿಯಿತು. ಪಿ.ಹರಿಕೃಷ್ಣ ಅವರು ಗ್ಯಾಬ್ರಿಯೆಲ್ ಸೆರ್ಗಿಸಿಯನ್‌ ಎದುರು ಸೋತರು. ವಿದಿತ್ ಸಂತೋಷ್‌ ಗುಜರಾತಿ, ಅರ್ಜುನ್‌ ಎರಿಗೈಸಿ ಮತ್ತು ಎಸ್‌.ಎಲ್‌.ನಾರಾಯಣನ್‌ ಅವರು ತಮ್ಮ ಎದುರಾಳಿಗಳ ಜತೆ ಡ್ರಾ ಸಾಧಿಸಿದರು.

ಭಾರತ ‘ಸಿ’ ತಂಡ ಪೆರು ಎದುರು 1–3 ಪಾಯಿಂಟ್‌ಗಳಿಂದ ಸೋತಿತು. ಸೂರ್ಯಶೇಖರ್‌ ಗಂಗೂಲಿ ಮತ್ತು ಅಭಿಜಿತ್‌ ಗುಪ್ತಾ ಪರಾಭವಗೊಂಡರೆ, ಎಸ್‌.ಪಿ.ಸೇತುರಾಮನ್‌ ಮತ್ತು ಕಾರ್ತಿಕೇಯನ್‌ ಮುರಳಿ ಡ್ರಾ ಸಾಧಿಸಿದರು.

ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡ ಉಕ್ರೇನ್‌ ಜತೆ 2–2 ರಲ್ಲಿ ಡ್ರಾ ಮಾಡಿಕೊಂಡಿತು. ಕೊನೇರು ಹಂಪಿ, ಡಿ.ಹರಿಕಾ, ಆರ್‌.ವೈಶಾಲಿ ಮತ್ತು ತಾನಿಯಾ ಸಚ್‌ದೇವ್‌ ಅವರು ಎದುರಾಳಿಗಳ ಜತೆ ಪಾಯಿಂಟ್‌ ಹಂಚಿಕೊಂಡರು.

ಭಾರತ ‘ಬಿ’ ತಂಡ 3.5–1.5 ರಲ್ಲಿ ಕ್ರೊವೇಷ್ಯ ಎದುರು ಗೆದ್ದರೆ, ‘ಸಿ’ ತಂಡ 1–3 ರಲ್ಲಿ ಪೋಲೆಂಡ್‌ ಎದುರು ಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.