ADVERTISEMENT

ಎತ್ತರ, ಉದ್ದ ಜಿಗಿತದಲ್ಲಿ ಈಕೆ ಮೀರಿಸುವವರಿಲ್ಲ!

ವಾಗೀಶ ಕುರುಗೋಡು
Published 29 ಜನವರಿ 2019, 20:00 IST
Last Updated 29 ಜನವರಿ 2019, 20:00 IST
ಉದ್ದ ಜಿಗಿತದ ಅಭ್ಯಾಸದಲ್ಲಿ ನಿರತಳಾಗಿರುವ ಬಿ. ವಿಜಯಲಕ್ಷ್ಮಿ
ಉದ್ದ ಜಿಗಿತದ ಅಭ್ಯಾಸದಲ್ಲಿ ನಿರತಳಾಗಿರುವ ಬಿ. ವಿಜಯಲಕ್ಷ್ಮಿ   

ಕುರುಗೋಡು: ಈ ಬಾಲಕಿಗೆ ಎತ್ತರ ಜಿಗಿತದಲ್ಲಿ ಮೀರಿಸುವವರು ಬೇರೊಬ್ಬರಿಲ್ಲ. ಉದ್ದ ಜಿಗಿತದಲ್ಲೂ ಅಷ್ಟೇ. ಓದಿನಲ್ಲೂ ಚುರುಕು.

ಇದುಪಟ್ಟಣದ ಗಾಂಧಿತತ್ವ ಬಾಲಕಿಯ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಬಿ. ವಿಜಯಲಕ್ಷ್ಮಿ ಕುರಿತ ಕಿರು ಪೀಠಿಕೆ.

ಕಿರು ವಯಸ್ಸಿನಲ್ಲೇಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಹೆಸರು ಮಾಡಿರುವ ಇವರು, ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಉಮೇದು ಹೊಂದಿದ್ದಾರೆ. ಈಗಾಗಲೇ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅದಕ್ಕೆ ನಿದರ್ಶನ.

ADVERTISEMENT

ಸಾರ್ವಜನಿಕ ಶಿಕ್ಷಣ ಇಲಾಖೆಯು ಬಳ್ಳಾರಿಯಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ 3.80 ಮೀಟರ್ ಉದ್ದ ಜಿಗಿದು, ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಹೊಸಪೇಟೆಯಲ್ಲಿ ಜರುಗಿದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ 1.23 ಮೀಟರ್ ಎತ್ತರ ಮತ್ತು 3.88 ಮೀಟರ್ ಉದ್ದ ಜಿಗಿದು ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಓಟದಲ್ಲಿಯೂ ಮುಂದಿರುವ ವಿಜಯಲಕ್ಷ್ಮಿ ನವೆಂಬರ್ ಎರಡನೇ ವಾರ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 16ನೇ ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದರು.

ಬಾಲಕಿಯ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಕ ಬಿ. ವೆಂಕಟೇಶ್‌ ಅವರಿಗೆ ಹೆಮ್ಮೆ ಇದೆ.‘ಬಳ್ಳಾರಿ ತಾಲ್ಲೂಕಿನ ಸಿಂದವಾಳ ಗ್ರಾಮದ ರೈತ ಬಿ.ಚಂದ್ರಗೌಡ ಮತ್ತು ಬಿ.ಪದ್ಮಾವತಿ ದಂಪತಿಯ ಮೂರು ಹೆಣ್ಣು ಮಕ್ಕಳಲ್ಲಿ ಎರಡನೆಯವಳಾದ ವಿಜಯಲಕ್ಷ್ಮಿ ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ ವ್ಯಾಸಂಗ ಮಾಡುತ್ತಿದ್ದಾಳೆ.ಆಟ–ಪಾಠದಲ್ಲಿ ಸಮಾನ ಆಸಕ್ತಿ ತೋರಿಸುತ್ತಿದ್ದಾಳೆ. ಆಕೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ’ ಎಂದು ದೈಹಿಕ ಶಿಕ್ಷಕ ಬಿ.ವೆಂಕಟೇಶ್ ಹೇಳಿದರು.

‘ಶಾಲೆಗೆ ಸ್ವಂತ ಮೈದಾನವಿಲ್ಲ. ಹತ್ತಿರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲೇ ದಿನವೂ ಅಭ್ಯಾಸ ಮಾಡುತ್ತಿದ್ದು, ಓಟ ಮತ್ತು ಜಿಗಿತ ಎರಡರಲ್ಲೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾಳೆ’ ಎಂದು ತಿಳಿಸಿದರು.

‘ನನಗೆ ಚಿಕ್ಕ ವಯಸ್ಸಿನಿಂದಲೂ ಆಟದ ಬಗ್ಗೆ ಆಸಕ್ತಿ. ಅದರಲ್ಲಿ ಸಾಧನೆ ಮಾಡಿ, ಹೆಸರು ಮಾಡಬೇಕೆಂಬ ಆಸೆ. ಮನೆ ಹಾಗೂ ಶಾಲೆಯಲ್ಲಿ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ವಿಜಯಲಕ್ಷ್ಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.