ಸ್ಟಾವೆಂಜರ್ (ನಾರ್ವೆ): ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರು ನಾರ್ವೆ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಆಘಾತ ನೀಡಿದರು.
ಮಂಗಳವಾರ ನಡೆದ ಪಂದ್ಯದಲ್ಲಿ ಗುಕೇಶ್ ಹೆಚ್ಚಿನ ಅವಧಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ಅವರ ಮೇಲೆ ಒತ್ತಡ ಹೇರಿದರೂ, ಕೊನೆಯಲ್ಲಿ ತಪ್ಪು ಮಾಡಿದರು. ನಂತರ ನಾರ್ವೆಯ ಆಟಗಾರ ‘ಎಂಡ್ ಗೇಮ್’ನಲ್ಲಿ ತಮಗಿದ್ದ ಕೌಶಲ ಪ್ರದರ್ಶಿಸಿ ಪೂರ್ಣ ಮೂರು ಪಾಯಿಂಟ್ ಪಡೆದರು. ಪಂದ್ಯ 55 ನಡೆಗಳನ್ನು ಕಂಡಿತು.
ಹಾಲಿ– ಮಾಜಿ ವಿಶ್ವ ಚಾಂಪಿಯನ್ನರ ನಡುವಣ ಈ ಪಂದ್ಯ ‘ಟೂರ್ನಿಯ ಹಣಾಹಣಿ’ ಎನಿಸಿ ಕುತೂಹಲಕ್ಕೆ ಕಾರಣವಾಗಿತ್ತು.
ಹಾಲಿ ಚಾಂಪಿಯನ್ ಕಾರ್ಲ್‌ಸನ್ ಮತ್ತು ಎರಡನೇ ಕ್ರಮಾಂಕದ ಆಟಗಾರ ಹಿಕಾರು ನಕಾಮುರ ಅವರು ಮೂರು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅಮೆರಿಕದ ನಕಾಮುರ ಮೊದಲ ಸುತ್ತಿನಲ್ಲಿ ಸ್ವದೇಶದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದರು.
ಕಣದಲ್ಲಿರುವ ಭಾರತದ ಇನ್ನೋರ್ವ ಆಟಗಾರ ಅರ್ಜುನ್ ಇರಿಗೇಶಿ (1.5), ಚೀನಾದ ಅಗ್ರ ಆಟಗಾರ ವೀ ಯಿ (1) ಅವರನ್ನು ರೋಚಕ ‘ಆರ್ಮ್‌ಗೆಡನ್’ ಆಟದಲ್ಲಿ ಸೋಲಿಸಿದರು. ಇವರಿಬ್ಬರ ನಡುವಣ ಕ್ಲಾಸಿಕಲ್ ಪಂದ್ಯ ಡ್ರಾ ಆಗಿತ್ತು.
ಟೂರ್ನಿಯ ನಿಯಮಗಳ ಪ್ರಕಾರ ಕ್ಲಾಸಿಕಲ್ ಪಂದ್ಯ ಗೆದ್ದವರು ಮಾತ್ರ ಪೂರ್ಣ 3 ಪಾಯಿಂಟ್ ಪಡೆಯುತ್ತಾರೆ. ಡ್ರಾ ಆದಲ್ಲಿ ಒಂದು ಪಾಯಿಂಟ್ ಮತ್ತು 20 ನಿಮಿಷಗಳ ನಂತರ ನಡೆಯುವ ಆರ್ಮ್‌ಗೆಡನ್ ಪಂದ್ಯ ಗೆದ್ದಲ್ಲಿ ಅರ್ಧ ಪಾಯಿಂಟ್ ನೀಡಲಾಗುತ್ತದೆ.
ಓಪನ್ ವಿಭಾಗದಲ್ಲಿ ಆರು ಮಂದಿ ಮತ್ತು ಮಹಿಳಾ ವಿಭಾಗದಲ್ಲಿ ಆರು ಮಂದಿ ಕಣದಲ್ಲಿದ್ದಾರೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತವೆ.
ಭಾರತದ ಆಟಗಾರ್ತಿಯರೇ ಇದ್ದ ಮಹಿಳಾ ವಿಭಾಗದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ರ್‍ಯಾಪಿಡ್ ಚಾಂಪಿಯನ್ ಕೋನೇರು ಹಂಪಿ, ಆರ್.ವೈಶಾಲಿ ಅವರ ವಿರುದ್ಧ ನಿರ್ಣಾಯಕ ಗೆಲುವನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.