ADVERTISEMENT

ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಉನ್ನತಿ, ಇಶಾರಾಣಿ

ಪಿಟಿಐ
Published 13 ಡಿಸೆಂಬರ್ 2025, 14:43 IST
Last Updated 13 ಡಿಸೆಂಬರ್ 2025, 14:43 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಕಟಕ್‌: ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಉನ್ನತಿ ಹೂಡ ಮತ್ತು ಇಶಾರಾಣಿ ಬರೂವಾ ಅವರು ಒಡಿಶಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಇಬ್ಬರೂ ಮೂರು ಗೇಮ್‌ಗಳ ಪಂದ್ಯದಲ್ಲಿ ಜಯಗಳಿಸಿದರು.

2022ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ 18 ವರ್ಷ ವಯಸ್ಸಿನ ಉನ್ನತಿ ಉತ್ತಮ ಹೋರಾಟ ಕಂಡ ಪಂದ್ಯದಲ್ಲಿ 18–21, 21–16, 21–16 ರಿಂದ ವಿಶ್ವದ ಮಾಜಿ ಜೂನಿಯರ್ ಅಗ್ರ ಕ್ರಮಾಂಕದ ಆಟಗಾರ್ತಿ ತಸ್ನಿಮ್ ಮೀರ್ ಅವರನ್ನು ಸೋಲಿಸಿದರು.

2023ರ ಅಬುದಾಭಿ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದ ಉನ್ನತಿ ಮೊದಲ ಗೇಮ್ ಕಳೆದುಕೊಂಡ ನಂತರ ಆಟದ ಮಟ್ಟ ಸುಧಾರಿಸಿಕೊಂಡರು. ರ್‍ಯಾಲಿಗಳ ಮೇಲೆ ಹೆಚ್ಚಿನ ನಿಯಂತ್ರಣ ಕಂಡುಬಂತು. ಕೊನೆಯ ಎರಡು ಗೇಮ್‌ಗಳಲ್ಲಿ ಸಂಯಮವನ್ನೂ ಕಾಪಾಡಿಕೊಂಡರು.

ADVERTISEMENT

ಮತ್ತೊಂದು ಸೆಮಿಫೈನಲ್‌ನಲ್ಲಿ ಅಸ್ಸಾಂನ ಇಶಾರಾಣಿ 18–21, 21–7, 21–7 ರಿಂದ ಕರ್ನಾಟಕದ ತನ್ವಿ ಹೇಮಂತ್ ಅವರನ್ನು ಹಿಮ್ಮೆಟ್ಟಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರ ವ್ಯವಹಾರವಾಗಿದ್ದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಕಿರಣ್ ಜಾರ್ಜ್ ಅವರು 21–19, 8–21, 21–18 ರಿಂದ ಸ್ವದೇಶದ ರೋನಕ್ ಚೌಹನ್ ಅವರನ್ನು ಸೋಲಿಸಿದರು. ಈ ಇಬ್ಬರೂ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು.

ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ಎಸ್‌.ಕಣಪುರಂ– ಆರ್‌.ಉತವಸೂರ್ಯನ್ ಅವರು 16–21, 19–21 ರಲ್ಲಿ ಐದನೇ ಶ್ರೇಯಾಂಕದ ಡೇಜನ್ ಫೆರ್ಡಿನನ್‌ಸ್ಯ – ಬಿ.ವರ್ದನಾ (ಇಂಡೊನೇಷ್ಯಾ) ಜೋಡಿಯೆದುರು ಸೋಲನುಭವಿಸಿತು. ಎರಡೂ ಗೇಮ್‌ಗಳಲ್ಲಿ ಏಕಾಗ್ರತೆ ಕಾಪಾಡಿಕೊಂಡ ಇಂಡೊನೇಷ್ಯಾ ಆಟಗಾರರು ನೇರ ಆಟಗಳ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.