ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿ: ಉನ್ನತಿ, ಕಿರಣ್‌ಗೆ ಸಿಂಗಲ್ಸ್‌ ಪ್ರಶಸ್ತಿ

ಪಿಟಿಐ
Published 14 ಡಿಸೆಂಬರ್ 2025, 15:29 IST
Last Updated 14 ಡಿಸೆಂಬರ್ 2025, 15:29 IST
<div class="paragraphs"><p>ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆದ ಕಿರಣ್‌ ಜಾರ್ಜ್‌ </p></div>

ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆದ ಕಿರಣ್‌ ಜಾರ್ಜ್‌

   

–‘ಎಕ್ಸ್‌’ ಚಿತ್ರ

ಕಟಕ್‌ : ಅಗ್ರಶ್ರೇಯಾಂಕದ ಆಟಗಾರರಾದ ಉನ್ನತಿ ಹೂಡಾ ಹಾಗೂ ಕಿರಣ್‌ ಜಾರ್ಜ್‌ ಅವರು ಭಾನುವಾರ ಮುಕ್ತಾಯಗೊಂಡ ಒಡಿಶಾ ಮಾಸ್ಟರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಕಿರೀಟ ತಮ್ಮದಾಗಿಸಿಕೊಂಡರು.

ADVERTISEMENT

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳೆಯರ ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಉನ್ನತಿ ಅವರು 21–17, 21–10ರಿಂದ ಸ್ವದೇಶದ ಇಶಾರಾಣಿ ಬರೂವಾ ಅವರನ್ನು ಮಣಿಸಿದರು. ಅಸ್ಸಾಂನ ಆಟಗಾರ್ತಿ ಇಶಾರಾಣಿ ಮೊದಲ ಗೇಮ್‌ನಲ್ಲಿ ಪ್ರತಿರೋಧ ತೋರಿದರಾದರೂ, ಎರಡನೇ ಗೇಮ್‌ನಲ್ಲಿ ಉನ್ನತಿ ಸಂಪೂರ್ಣ ಹಿಡಿತ ಸಾಧಿಸಿದರು.

ತೀವ್ರ ಪೈಪೋಟಿ ಇದ್ದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ ಭಾರತದ ಭರವಸೆಯ ಆಟಗಾರ ಕಿರಣ್‌ ಅವರು 21–14, 13–21, 21–16ರಿಂದ ಇಂಡೊನೇಷ್ಯಾದ ಮುಹಮ್ಮದ್‌ ಯೂಸುಫ್‌ ಅವರನ್ನು ಸೋಲಿಸಿದರು. 65 ನಿಮಿಷಗಳ ವರೆಗೆ ಸಾಗಿದ ಈ ಇಬ್ಬರು ಆಟಗಾರರ ಪೈಪೋಟಿಯು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಮಹಿಳೆಯರ ಡಬಲ್ಸ್‌ನಲ್ಲಿ ಬಲ್ಗೇರಿಯಾದ ಗ್ಯಾಬ್ರಿಯೆಲಾ– ಸ್ಟೆಫಾನಿ ಸ್ಟೋವಾ ಜೋಡಿಯು 21–19, 21–14ರಿಂದ ಮಲೇಷ್ಯಾದ ಆಂಗ್‌ ಷಿನ್‌ ಯೀ ಹಾಗೂ ಕಾರ್ಮೆನ್‌ ಟಿಂಗ್‌ ಅವರನ್ನು ಸೋಲಿಸಿ, ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಇಂಡೊನೇಷ್ಯಾದ ಅಲಿ ಫಾಥಿರ್‌ ರೆಯಾನ್‌ ಹಾಗೂ ದೇವಿನ್‌ ಅರ್ಥ ವಹ್ಯುಡಿ ಅವರು 15–21, 21–12, 21–16ರಿಂದ ಮಲೇಷ್ಯಾದ ಖಾಂಗ್‌ ಖೈ ಷಿಂಗ್‌– ಆ್ಯರನ್‌ ತೈ ಜೋಡಿಯನ್ನು ಮಣಿಸಿದರು.

ಪ್ರಶಸ್ತಿಯೊಂದಿಗೆ ಉನ್ನತಿ ಹೂಡ (ಬಲ) ಹಾಗೂ ಇಶಾರಾಣಿ ಬರೂವಾ

ಮಿಶ್ರ ಡಬಲ್ಸ್‌ನಲ್ಲಿ ಇಂಡೊನೇಷ್ಯಾದ ಮಾರ್ವನ್ ಫಾಝಾ–ಐಶ್ಯಾ ಪ್ರಣತಾ ಜೋಡಿಯು ಸ್ವದೇಶದ 21–15, 21–10ರಿಂದ ಸ್ವದೇಶದ ಡೇಜನ್‌ ಫರ್ದಿನನ್‌ಸ್ಯಾ–ಬರ್ನಡೈನ್‌ ವಾರ್ದನಾ ಜೋಡಿಯನ್ನು ಮಣಿಸಿ, ಪ್ರಶಸ್ತಿ ಎತ್ತಿಹಿಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.