ADVERTISEMENT

ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಜಾವೆಲಿನ್ ಎಸೆತಗಾರ ಶಿವಪಾಲ್

ಪಿಟಿಐ
Published 20 ಮೇ 2025, 15:20 IST
Last Updated 20 ಮೇ 2025, 15:20 IST
   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2020) ಭಾಗವಹಿಸಿದ್ದ ಜಾವೆಲಿನ್‌ ಥ್ರೊ ಸ್ಪರ್ಧಿ ಶಿವಪಾಲ್ ಸಿಂಗ್ ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ್ದಾರೆ. ಅವರು ದೋಷಿ ಎಂದು ಸಾಬೀತಾದಲ್ಲಿ ಗರಿಷ್ಠ ಎಂಟು ವರ್ಷಗಳ ನಿಷೇಧ ಅನುಭವಿಸಬೇಕಾಗುತ್ತದೆ.

29 ವರ್ಷ ವಯಸ್ಸಿನ ಶಿವಪಾಲ್‌ ಅವರಿಂದ ಈ ವರ್ಷದ ಆರಂಭದಲ್ಲಿ ಪಡೆದ ಮಾದರಿ ಫಲಿತಾಂಶ ‘ಪಾಸಿಟಿವ್‌’ ಆಗಿದೆ ಎನ್ನಲಾಗಿದೆ. ಮಾದರಿ ಪಡೆದಿದ್ದ ವೇಳೆ ಯಾವುದೇ ಸ್ಪರ್ಧೆಯಿರಲಿಲ್ಲ. ಆ ವೇಳೆ ಅವರು ಪಾಟಿಯಾಲದ ಎನ್‌ಐಎಸ್‌ನಲ್ಲಿ ತರಬೇತಿಯಲ್ಲಿದ್ದರು.

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕವು (ನಾಡಾ) ಅವರ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಿದೆ. ‘ಶಿವಪಾಲ್ ಅವರು ಮದ್ದು ಪರೀಕ್ಷೆಯಲ್ಲಿ ಸಿಲುಕಿರುವುದು ನಿಜ. ಡೋಪಿಂಗ್ ಪರೀಕ್ಷೆಯಲ್ಲಿ ಎರಡನೇ ಸಲ ಅವರು ಸಿಲುಕಿದ್ದಾರೆ’ ಎಂದು ಈ ಬೆಳವಣಿಗೆ ಬಲ್ಲ ಮೂಲವೊಂದು ಪಿಟಿಐಗೆ ತಿಳಿಸಿದೆ.

ADVERTISEMENT

ಎರಡನೇ ಸಲದ ತಪ್ಪಿಗೆ ನಾಡಾ ಮತ್ತು ವಾಡಾ (ವಿಶ್ವ ಡೋಪಿಂಗ್ ತಡೆ ಘಟ) ನಿಯಮಗಳ ಪ್ರಕಾರ ಗರಿಷ್ಠ ಎಂಟು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಹಿಂದೆ 2021ರಲ್ಲಿ ಅವರು ಮದ್ದುಸೇವನೆ ಮಾಡಿದ್ದು ಪತ್ತೆಯಾಗಿತ್ತು. ಆದರೆ ಇದು ತಮ್ಮಿಂದ ಆದ ತಪ್ಪಲ್ಲ ಎಂದು ಅವರ ಮನವಿ ಪರಿಗಣಿಸಿದ ನಾಡಾದ ಅಪೀಲು ಸಮಿತಿ ಈ ಶಿಕ್ಷೆಯನ್ನು ನಾಲ್ಕು ವರ್ಷದಿಂದ ಒಂದು ವರ್ಷಕ್ಕೆ ಇಳಿಸಿತ್ತು.

2019ರಲ್ಲಿ ದೋಹಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಶಿವಪಾಲ್ 86.23 ಮೀ. ಎಸೆತದೊಡನೆ ಬೆಳ್ಳಿ ಗೆದ್ದಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.