ADVERTISEMENT

ಫಿಟ್‌ನೆಸ್‌ನತ್ತ ಆರ್ಚರಿಪಟುಗಳ ಚಿತ್ತ

ಪಿಟಿಐ
Published 9 ಅಕ್ಟೋಬರ್ 2020, 13:55 IST
Last Updated 9 ಅಕ್ಟೋಬರ್ 2020, 13:55 IST
ಅತನು ದಾಸ್‌–ರಾಯಿಟರ್ಸ್ ಚಿತ್ರ
ಅತನು ದಾಸ್‌–ರಾಯಿಟರ್ಸ್ ಚಿತ್ರ   

ನವದೆಹಲಿ: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಥ್ಲೀಟುಗಳ ತರಬೇತಿ ಶಿಬಿರಗಳು ಕ್ರಮೇಣ ಪುನರಾರಂಭವಾಗುತ್ತಿವೆ. ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಆರ್ಚರಿ ಪಟುಗಳು ಫಿಟ್‌ನೆಸ್‌ಅನ್ನು ಮರಳಿ ಗಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ಕೊರೊನಾ ವೈರಾಣು ನಿಯಂತ್ರಣಕ್ಕಾಗಿ‌ ದೇಶಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಮಾರ್ಚ್‌ನಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದರಿಂದ ಭಾರತದ ಕ್ರೀಡಾಪಟುಗಳ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಗೆ ಅಡ್ಡಿ ಉಂಟಾಗಿತ್ತು.

ಪುರುಷ ಹಾಗೂ ಮಹಿಳಾ ಆರ್ಚರಿ ಪಟುಗಳು ಆಗಸ್ಟ್‌ 25ರಂದು ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ಆರಂಭವಾದ ಶಿಬಿರದ ಮೂಲಕ ತರಬೇತಿಗೆ ಮರಳಿದ್ದಾರೆ.

ADVERTISEMENT

‘ತರಬೇತಿಗೆ ಮರಳಿದ ನಂತರ ಕೆಲವು ದಿನಗಳ ಕಾಲ ನಡೆಸಿದ ಅಭ್ಯಾಸವು,ಲಾಕ್‌ಡೌನ್‌ ಹೇರುವ ಮೊದಲು ನಾವು ಮಾಡುತ್ತಿದ್ದ ತಾಲೀಮಿಗಿಂತ ಕಷ್ಟಕರ ಎನಿಸಿತ್ತು. ತರಬೇತಿಯಿಂದ ಇಷ್ಟು ದೀರ್ಘ ಕಾಲ ದೂರ ಉಳಿದಿದ್ದು ಇದೇ ಮೊದಲು‘ ಎಂದು ಈ ಬಾರಿಯ ಅರ್ಜುನ ಪ್ರಶಸ್ತಿ ವಿಜೇತ ಆರ್ಚರಿ ಪಟು ಅತನು ದಾಸ್‌ ಹೇಳಿದ್ದಾರೆ.

ಭಾರತದ ಪುರುಷರ ರಿಕರ್ವ್‌ ಆರ್ಚರಿ ತಂಡ ಹಾಗೂ ದೀಪಿಕಾ ದಾಸ್‌ ಅವರು ಈಗಾಗಲೇ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಿದ್ದಾರೆ.

‘ಕೊರೊನಾ ವೈರಾಣು ಹರಡದಂತೆ ನಿಯಂತ್ರಿಸಲು ಎಎಸ್‌ಐನಲ್ಲಿ ಅನುಸರಿಸುತ್ತಿರುವ ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಆರ್ಚರಿ ಪಟುಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಹೇಳಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲುಭಾರತದ ಮಹಿಳಾ ರಿಕರ್ವ್‌ ಆರ್ಚರಿ ತಂಡಕ್ಕೆ, ಮುಂದಿನ ವರ್ಷ ನಡೆಯಲಿರುವ ವಿಶ್ವ ಅರ್ಹತಾ ಟೂರ್ನಿಯ ಮೂಲಕ ಕೊನೆಯ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.