ADVERTISEMENT

ನಾವು ಆಯೋಜಿಸುವ ಚಾಂಪಿಯನ್‌ಷಿಪ್ ನೈಜ: ಅಡ್‌ಹಾಕ್ ಸಮಿತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 17:19 IST
Last Updated 17 ಜನವರಿ 2024, 17:19 IST
ಭಾರತ ಕುಸ್ತಿ ಫೆಡರೇಷನ್‌
ಭಾರತ ಕುಸ್ತಿ ಫೆಡರೇಷನ್‌   

ನವದೆಹಲಿ: ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜಿಸುವ ಅಧಿಕಾರ ರಾಷ್ಟ್ರೀಯ ಫೆಡರೇಶನ್‌ಗೆ ಮಾತ್ರ ಇದೆ ಎಂದು  ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್ಐ)ಯ ಅಮಾನತುಗೊಂಡಿರುವ ಆಡಳಿತ ಸಮಿತಿ ಪ್ರತಿಪಾದಿಸಿದ ಬೆನ್ನಲ್ಲೆ, ಐಒಎ ನೇಮಿಸಿದ ತಾತ್ಕಾಲಿಕ ಸಮಿತಿಯು ತಾನು ಆಯೋಜಿಸುವ ಪಂದ್ಯಾವಳಿ ಮಾತ್ರ ನೈಜ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

ನಾವು ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ತಾತ್ಕಾಲಿಕ ಸಮಿತಿ ಸ್ಪಷ್ಟಪಡಿಸಿದೆ.

ಮಂಗಳವಾರ ನಡೆದ ಮೊದಲ ಕಾರ್ಯಕಾರಿ ಸಮಿತಿ ಸಭೆ ಬಳಿಕ ಜನವರಿ 29 ರಿಂದ ಪುಣೆಯಲ್ಲಿ ಕ್ರೀಡಾಕೂಟ ನಡೆಸುವುದಾಗಿ ಡಬ್ಲ್ಯುಎಫ್ಐ ಮಂಗಳವಾರ ಘೋಷಿಸಿತ್ತು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸಲು ತಾತ್ಕಾಲಿಕ ಸಮಿತಿಗೆ ಯಾವುದೇ ಅಧಿಕಾರವಿಲ್ಲ ಎಂದು ಡಬ್ಲ್ಯುಎಫ್ಐ ವಾದಿಸಿತು.

ADVERTISEMENT

‘ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ಸಹಯೋಗದೊಂದಿಗೆ ಆಯೋಜಿಸುವ ಸೀನಿಯರ್‌ ರಾಷ್ಟ್ರೀಯ ಫ್ರೀ ಸ್ಟೈಲ್, ಗ್ರೀಕೊ ರೋಮನ್ ಶೈಲಿ ಮತ್ತು ಮಹಿಳಾ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ 2023 ಮಾತ್ರ ನೈಜ ಮತ್ತು ಮಾನ್ಯತೆ ಪಡೆದ ಚಾಂಪಿಯನ್‌ಷಿಪ್ ಆಗಿದೆ. ಅಂತಹ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಾತ್ರ ಸರ್ಕಾರದ ಎಲ್ಲಾ ಪ್ರಯೋಜನಗಳು ಸಿಗುತ್ತವೆ’ ಎಂದು ಅಡ್‌ಹಾಕ್‌ ಸಮಿತಿಯ ಮುಖ್ಯಸ್ಥ ಭೂಪಿಂದರ್ ಸಿಂಗ್ ಬಜ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕ್ರೀಡೆ ಒಂದು ತಮಾಷೆಯಾಗಿ ಮಾರ್ಪಟ್ಟಿದೆ. ನಾವು ಎಲ್ಲಿಗೆ ಹೋಗಬೇಕು? ಕುಸ್ತಿಪಟುಗಳು ಮತ್ತು ಕ್ರೀಡೆಯ ಹಿತದೃಷ್ಟಿಯಿಂದ ಈ ಇಡೀ ಅವ್ಯವಸ್ಥೆ ಹೋಗಬೇಕು‘ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳಾ ಕುಸ್ತಿಪಟು ಹೇಳಿದರು.

ಈ ನಡುವೆ ಹರಿಯಾಣದ ಕುಸ್ತಿಪಟುಗಳು ಪುಣೆಯಲ್ಲಿ ಡಬ್ಲ್ಯುಎಫ್ಐ ಆಯೋಜಿಸಿರುವ ನ್ಯಾಷನಲ್ಸ್‌ನಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಆರ್‌ಎಸ್‌‍ಪಿಬಿ ಸಹಾಯದಿಂದ ತಾತ್ಕಾಲಿಕ ಸಮಿತಿಯು ಫೆಬ್ರವರಿ 2-5 ರವರೆಗೆ ಜೈಪುರದಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.