ADVERTISEMENT

ಹಾಕಿ ಕಂಡ ಶ್ರೇಷ್ಠ ಆಟಗಾರ ಎಂ.ಪಿ.ಗಣೇಶ್‌ಗೆ ಪದ್ಮ ಶ್ರೀ

ಕೊಡಗಿನ ಕ್ರೀಡಾ ಪ್ರೇಮಿಗಳಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 16:14 IST
Last Updated 25 ಜನವರಿ 2020, 16:14 IST
ಮೊಳ್ಳೆರ ಪಿ. ಗಣೇಶ್‌ (ಪ್ರಜಾವಾಣಿ ಸಂಗ್ರಹ ಚಿತ್ರ)
ಮೊಳ್ಳೆರ ಪಿ. ಗಣೇಶ್‌ (ಪ್ರಜಾವಾಣಿ ಸಂಗ್ರಹ ಚಿತ್ರ)   

ಮಡಿಕೇರಿ: ಭಾರತದ ಹಾಕಿ ಕಂಡ ಶ್ರೇಷ್ಠ ಆಟಗಾರರಲ್ಲಿ ಕೊಡಗಿನ ಮೊಳ್ಳೆರ ಪಿ. ಗಣೇಶ್‌ ಪ್ರಮುಖರು. ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಅವರು 1946ರ ಜುಲೈ 8ರಂದು ಜನಿಸಿದ್ದರು.

ಭಾರತ ಹಾಕಿ ತಂಡದ ನಾಯಕರಾಗಿದ್ದ ಅವರಿಗೆ ಈ ಸಾಲಿನ ‘ಪದ್ಮ ಶ್ರೀ’ ಗೌರವ ಲಭಿಸಿರುವುದು ಕೊಡಗಿನ ಕ್ರೀಡಾಪ್ರೇಮಿಗಳಿಗೆ ಹರ್ಷ ತಂದಿದೆ. 1970 ಮತ್ತು 1974ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ, 1971ರ ಹಾಕಿ ವಿಶ್ವಕಪ್‌ನಲ್ಲಿ ಕಂಚಿನ ಪದಕ ಮತ್ತು 1972ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಗಣೇಶ್‌ ಇದ್ದರು.

ಆರಂಭದ ದಿನಗಳಲ್ಲಿ ಫುಟ್‌ಬಾಲ್‌ ಆಟಗಾರರಾಗಿದ್ದ ಗಣೇಶ್‌ ಅವರು ಆ ಬಳಿಕ ಹಾಕಿ ಕ್ರೀಡೆಯತ್ತ ಆಕರ್ಷಿತರಾದರು. ಭಾರತೀಯ ಸೇನೆಗೆ ಸೇರಿದ ಮೇಲೆ ಹಾಕಿಯಲ್ಲಿ ಹಲವು ಸಾಧನೆ ಮಾಡಿದ್ದು ಅವರ ಹೆಗ್ಗಳಿಕೆ.

‘ಗಾಯದ ಸಮಸ್ಯೆಯಿಂದಾಗಿ ಹಾಕಿ ಆಟದಿಂದ ದೂರ ಉಳಿದಿದ್ದ ಗಣೇಶ್‌, ತಮ್ಮ ಆಟದ ಕೌಶಲವನ್ನು ಇತರ ಆಟಗಾರರಿಗೆ ಧಾರೆ ಎರೆಯುವುದನ್ನು ಮಾತ್ರ ಮರೆಯಲಿಲ್ಲ. ಭಾರತ ಹಾಕಿ ತಂಡದ ಕೋಚ್‌ ಆಗಿಯೂ ಹಲವು ವರ್ಷ ಕೆಲಸ ಮಾಡಿದ್ದರು’ ಎಂದು ಸುಂಟಿಕೊಪ್ಪದ ಕ್ರೀಡಾಪ್ರೇಮಿ ದಿನೇಶ್‌ ನೆನಪಿಸಿಕೊಂಡರು.

ಕೇಂದ್ರ ಸರ್ಕಾರ ರಚಿಸಿರುವ ‘ಹಾಕಿ ಕ್ರೀಡೆಯ ಪುನರುತ್ಥಾನ ಸಮಿತಿ’ಯ ಮುಖ್ಯಸ್ಥರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲೆಯ ಕೋದಂಡ ರೋಹಿಣಿ ಪೂವಯ್ಯ ಅವರಿಗೆ ‘ಪದ್ಮಶ್ರೀ’ ಗೌರವ ಲಭಿಸಿತ್ತು. ಗಣೇಶ್‌ ಅವರಿಗೂ ಈ ಗೌರವ ಸಿಗುವ ಮೂಲಕ ಕ್ರೀಡಾ ತವರು ಕೊಡಗಿಗೆ ಎರಡನೇ ಪದ್ಮಶ್ರೀ ಬಂದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.