ADVERTISEMENT

ಆತಂಕದ ನಡುವೆ ಪ್ಯಾರಾಲಿಂಪಿಕ್ಸ್‌ ಜ್ಯೋತಿ ಬೆಳಕು

ದಾಖಲೆ ಸಂಖ್ಯೆಯ ಕೋವಿಡ್ ಪ್ರಕರಣಗಳು: ತುರ್ತು ಪರಿಸ್ಥಿತಿಯಲ್ಲಿ ಅಥ್ಲೀಟ್‌ಗಳಿಗೆ ಚಿಕಿತ್ಸೆ ಸಿಗದಿರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 11:18 IST
Last Updated 20 ಆಗಸ್ಟ್ 2021, 11:18 IST
ಟೋಕಿಯೊದ ಒಡೈಬ ಮರೈನ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿರುವ ಪ್ಯಾರಾಲಿಂಪಿಕ್ ಲಾಂಛನ –ಎಎಫ್‌ಪಿ ಚಿತ್ರ
ಟೋಕಿಯೊದ ಒಡೈಬ ಮರೈನ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿರುವ ಪ್ಯಾರಾಲಿಂಪಿಕ್ ಲಾಂಛನ –ಎಎಫ್‌ಪಿ ಚಿತ್ರ   

ಟೋಕಿಯೊ: ಪ್ಯಾರಾಲಿಂಪಿಕ್ಸ್‌ ಕೂಟ ಆರಂಭಕ್ಕೆ ನಾಲ್ಕು ದಿನ ಮಾತ್ರ ಉಳಿದಿದ್ದು ಕ್ರೀಡಾಜ್ಯೋತಿ ಶುಕ್ರವಾರ ಟೋಕಿಯೊ ತಲುಪಿದೆ. ಈ ನಡುವೆ ಕೋವಿಡ್ ಪ್ರಕರಣಗಳು ಏರುಗತಿಯಲ್ಲೇ ಸಾಗುತ್ತಿರುವುದರಿಂದ ತುಂಬ ಕಠಿಣ ಪರಿಸ್ಥಿತಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸುವ ಸವಾಲು ಇದೆ ಎಂದು ಆಯೋಜಕರು ಹೇಳಿದ್ದಾರೆ.

ರೂಪಾಂತರಿತ ಡೆಲ್ಟಾ ವೈರಸ್‌ನಿಂದ ಜಪಾನ್‌ನಲ್ಲಿ ಗರಿಷ್ಠ ಮಟ್ಟದ ‍ಪ್ರಕರಣಗಳು ದಾಖಲಾಗುತ್ತಿದ್ದು ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿಕೊಂಡಿವೆ. ಹೀಗಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವವರಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಅವರನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆಗಳ ಮುಖ್ಯಸ್ಥರು ಹೇಳಿರುವುದಾಗಿ ಅಸಾಹಿ ಪತ್ರಿಕೆ ವರದಿ ಮಾಡಿದೆ.

‘ವೈದ್ಯಕಿಯ ಪರಿಸ್ಥಿತಿಯು ನಮಗೆ ಪೂರಕವಾಗಿಲ್ಲ. ಆದರೂ ಪ್ಯಾರಾಲಿಂಪಿಕ್ಸ್ ಆಯೋಜಿಸಿಯೇ ತೀರುತ್ತೇವೆ. ಯಾರಾದರೂ ಅಗತ್ಯ ಚಿಕಿತ್ಸೆ ಬೇಕಾದರೆ ಏನು ಮಾಡುವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ರೂಪ ಇಲ್ಲ. ಒಲಿಂಪಿಕ್ಸ್ ಸಂದರ್ಭದ ರೀತಿಯಲ್ಲೇ ಕೋವಿಡ್ ನಿಯಮಗಳನ್ನು ಪಾಲಿಸಿ ಪ್ಯಾರಾಲಿಂಪಿಕ್ಸ್ ನಡೆಸಲಾಗುವುದು’ ಎಂದು ಅಧಿಕಾರಿ ಹಿಡೆಮಸಾ ನಕಮುರ ‍ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಒಲಿಂಪಿಕ್ಸ್‌ಗೆ ಹೋಲಿಸಿದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ. ಆದರೆ ಕೋವಿಡ್ ಪ್ರಕರಣಗಳು ಈಗ ನಿತ್ಯವೂ ದಾಖಲೆ ಮಟ್ಟದಲ್ಲಿ ದಾಖಲಾಗುತ್ತಿವೆ. ಹೀಗಾಗಿ ಹೊರಗೆ ಆಹಾರ ಸೇವಿಸುವುದು, ಜೊತೆಯಾಗಿ ಕುಳಿತು ಮದ್ಯ ಸೇವಿಸುವುದು ಇತ್ಯಾದಿಗಳಿಂದ ದೂರ ಇರಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಆಯೋಜಕರು ಸೂಚಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ಗೆ ಸಂಬಂಧಿಸಿ ಒಬ್ಬರು ಕ್ರೀಡಾಪಟು ಸೇರಿದಂತೆ 12 ಮಂದಿಗೆ ಕೋವಿಡ್ ಇರುವುದುಶುಕ್ರವಾರ ಖಚಿತವಾಗಿದೆ.

ಬೆಳಗಿದ ಕ್ರೀಡಾಜ್ಯೋತಿ
ಕ್ರೀಡಾಜ್ಯೋತಿ ಟೋಕಿಯೊಗೆ ತಲುಪಿದ ನಂತರ ವಿವಿಧ ಕಡೆಗಳಲ್ಲಿ ಜ್ಯೋತಿ ಬೆಳಗಿಸಲಾಯಿತು. ಆದರೆ ಎಲ್ಲೂ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. ಕಳೆದ ಕೆಲವು ವಾರಗಳಲ್ಲಿ ದೇಶದ ವಿವಿಧ ಕಡೆಗಳಲ್ಲಿ ಜ್ಯೋತಿಯಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಶುಕ್ರವಾರ ಟೋಕಿಯೊದಲ್ಲೂ ಇಂಥ ಕಾರ್ಯಕ್ರಮಗಳು ನಡೆದವು. ಸಂಜೆ ಎಲ್ಲ ಜ್ಯೋತಿಗಳನ್ನು ಒಟ್ಟುಗೂಡಿಸುವ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿತ್ತು.

ಒಲಿಂಪಿಕ್ಸ್‌ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಅಳವಡಿಸಿದ್ದ ಐದು ಚಕ್ರಗಳ ಲಾಂಛನವನ್ನು ತೆಗೆಯುವ ಕಾರ್ಯ ಕೆಲವು ದಿನಗಳಿಂದ ನಡೆದಿತ್ತು. ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಪ್ಯಾರಾಲಿಂಪಿಕ್ಸ್‌ ಲಾಂಛನಗಳನ್ನು ಶುಕ್ರವಾರ ಟೋಕಿಯೊ ನಗರಕ್ಕೆ ತಂದಿಳಿಸಲಾಯಿತು. ಈಗ ಅವುಗಳು ಎಲ್ಲ ಕಡೆಗಳಲ್ಲಿ ಕಂಗೊಳಿಸುತ್ತಿವೆ.

ಇದೇ 24ರಂದು ಆರಂಭಗೊಳ್ಳುವ ಪ್ಯಾರಾಲಿಂಪಿಕ್ಸ್‌ನಲ್ಲಿ 22 ಕ್ರೀಡೆಗಳು ಇರುತ್ತವೆ. 4,400 ಕ್ರೀಡಾಪಟುಗಳು ಪಾಲ್ಗೊಳ್ಳುವರು.

ಭಾರತಕ್ಕೆ 15 ಪಕದ ಖಚಿತ: ಗುರುಶರಣ್‌
ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐದು ಚಿನ್ನ ಸೇರಿದಂತೆ ಒಟ್ಟು 15 ಪದಕಗಳನ್ನು ಗೆಲ್ಲಲಿದೆ ಎಂದು ತಂಡದ ಚೆಫ್‌ ಡಿ ಮಿಷನ್ ಗುರುಶರಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಿಂದ ಈ ಬಾರಿ ಗರಿಷ್ಠ ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಒಂಬತ್ತು ಕ್ರೀಡೆಗಳಲ್ಲಿ ಒಟ್ಟು 54 ಮಂದಿ ಸ್ಪರ್ಧಿಸಲಿದ್ದು ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಶೂಟಿಂಗ್ ಮತ್ತು ಆರ್ಚರಿಯಲ್ಲಿ ಹೆಚ್ಚು ನಿರೀಕ್ಷೆ ಇದೆ ಎಂದು ಗುರುಶರಣ್ ಹೇಳಿದ್ದಾರೆ. ಕನೋಯಿಂಗ್‌, ಈಜು, ಪವರ್‌ಲಿಫ್ಟಿಂಗ್‌ ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊದಲ್ಲೂ ಭಾರತದ ಪ್ರತಿನಿಧಿಗಳು ಇದ್ದಾರೆ. ಈ ವರೆಗೆ ದೇಶ 11 ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ನಾಲ್ಕು ಚಿನ್ನ ಸೇರಿದಂತೆ 12 ಪದಕಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.