ADVERTISEMENT

ಪ್ರೊ ಕಬಡ್ಡಿ ಲೀಗ್‌: ‘ಎಕ್ಸ್‌ಪ್ರೆಸ್’ ಓಟಕ್ಕೆ ತಡೆಯಾಗುವುದೇ ಪಟ್ನಾ?

ಪ್ರಶಾಂತ್ ಬಳಗಕ್ಕೆ ನಾಲ್ಕನೇ ಪ್ರಶಸ್ತಿ ಕನಸು; ಡೆಲ್ಲಿಗೆ ಮೊದಲ ಟ್ರೋಫಿ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 21:02 IST
Last Updated 24 ಫೆಬ್ರುವರಿ 2022, 21:02 IST
ನವೀನ್ ಕುಮಾರ್
ನವೀನ್ ಕುಮಾರ್   

ಬೆಂಗಳೂರು: ಚುರುಕಿನ ರೇಡಿಂಗ್ ಮತ್ತು ಮಿಂಚಿನ ಟ್ಯಾಕ್ಲಿಂಗ್ ಮೂಲಕ ಗಮನ ಸೆಳೆದಿರುವ ತಂಡಗಳೆರಡು ಪ್ರೊ ಕಬಡ್ಡಿ ಲೀಗ್‌ನ ಪ್ರಶಸ್ತಿಗಾಗಿ ಶುಕ್ರವಾರ ಸೆಣಸಲಿವೆ. ಮೊದಲ ಬಾರಿ ಟ್ರೋಫಿಗೆ ಮುತ್ತಿಡುವ ನಿರೀಕ್ಷೆಯೊಂದಿಗೆ ದಬಂಗ್ ಡೆಲ್ಲಿ ಮತ್ತು ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪಟ್ನಾ ಪೈರೇಟ್ಸ್ ಹಣಾಹಣಿ ಕುತೂಹಲ ಕೆರಳಿಸಿದೆ.

ಲೀಗ್‌ ಹಂತದ ಪಾಯಿಂಟ್ ಪಟ್ಟಿಯಲ್ಲಿ ಪಟ್ನಾ ಅಗ್ರ ಸ್ಥಾನ ಗಳಿಸಿದ್ದು ಎರಡನೇ ಸ್ಥಾನದಲ್ಲಿ ದಬಂಗ್‌ ಡೆಲ್ಲಿ ಇದೆ. ರೇಡಿಂಗ್‌ನಲ್ಲೂ ಟ್ಯಾಕ್ಲಿಂಗ್‌ನಲ್ಲೂ ಎಂಟನೇ ಆವೃತ್ತಿಯ ಆರಂಭದಿಂದಲೂ ಮಿಂಚಿದ ಆಟಗಾರರು ಎರಡೂ ತಂಡಗಳಲ್ಲಿ ಇದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಪ್ರಬಲ ಎದುರಾಳಿಗಳನ್ನು ಸುಲಭವಾಗಿ ಮಣಿಸಿರುವುದರಿಂದ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿಯ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಪ್ರದೀಪ್ ನರ್ವಾಲ್, ಸುರೇಂದರ್ ಗಿಲ್‌ ಅವರಂಥ ಬಲಿಷ್ಠ ರೇಡರ್‌ಗಳನ್ನು ಹೊಂದಿರುವ ಯು.ಪಿ ಯೋಧಾವನ್ನು ಸೆಮಿಫೈನಲ್‌ನಲ್ಲಿ ಸುಲಭವಾಗಿ ಮಣಿಸಲು ಸಾಧ್ಯವಾದ್ದರಿಂದ ಪಟ್ನಾ ಪೈರೇಟ್ಸ್ ಭರವಸೆಯಲ್ಲಿದೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಅವರ ನೇತೃತ್ವದ ತಂಡ ತಂತ್ರ ಹೆಣೆಯುವುದರಲ್ಲೂ ಚಾಣಾಕ್ಷವಾಗಿದೆ.

ADVERTISEMENT

ನಾಲ್ಕರ ಘಟ್ಟದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಪ್ರಬಲ ಪೈಪೋಟಿಯನ್ನು ಸುಲಭವಾಗಿ ಮೀರಿ ನಿಲ್ಲಲು ಸಾಧ್ಯವಾಗಿರುವುದು ಡೆಲ್ಲಿಯ ಭರವಸೆಯನ್ನು ಹೆಚ್ಚಿಸಿದೆ.

ಪಟ್ನಾ ಪೈರೇಟ್ಸ್ ತಂಡ ರೇಡಿಂಗ್‌ನಲ್ಲೂ ಟ್ಯಾಕ್ಲಿಂಗ್‌ನಲ್ಲೂ ಸಮಾನ ಸಾಮರ್ಥ್ಯ ಮೆರೆಯುವ ಆಟಗಾರರನ್ನು ಪಳಗಿಸಿದೆ. ಎಡಬದಿಯ ಕಾರ್ನರ್‌ ಆಟಗಾರ ಇರಾನ್‌ನ ಮೊಹಮ್ಮದ್‌ರೇಜಾ ಶಡ್ಲೊ ಈ ಆವೃತ್ತಿಯಲ್ಲಿ ಅತಿ ಹೆಚ್ಚು ಟ್ಯಾಕ್ಲಿಂಗ್ ಪಾಯಿಂಟ್‌ಗಳ ಸಾಧನೆ ಮಾಡಿದ್ದಾರೆ. ಕವರ್ ಡಿಫೆಂಡರ್‌ಗಳಾದ ನೀರಜ್ ಕುಮಾರ್ ಮತ್ತು ಸಾಜಿನ್ ಅವರು ಎಂಥ ರೇಡರ್‌ಗಳನ್ನು ಕೂಡ ಬಲೆಗೆ ಬೀಳಿಸಬಲ್ಲರು. ರೇಡಿಂಗ್‌ನಲ್ಲಿ ಪ್ರಶಾಂತ್ ಕುಮಾರ್ ರೈ ಅವರಿಗೆ ಸಚಿನ್‌, ಗುಮಾನ್ ಸಿಂಗ್ ಮತ್ತು ಮೋನು ಗೋಯತ್‌ ಅವರ ಅಮೋಘ ಬಲ ಇದೆ.

ನವೀನ್‌, ಜೀವಕುಮಾರ್ ಮೇಲೆ ಭರವಸೆ

‘ಎಕ್ಸ್‌ಪ್ರೆಸ್’ ಖ್ಯಾತಿಯ ನವೀನ್ ಕುಮಾರ್ ದಬಂಗ್ ಡೆಲ್ಲಿ ತಂಡದ ರೇಡಿಂಗ್‌ನ ಆಧಾರವಾಗಿದ್ದರೆ ಟ್ಯಾಕ್ಲಿಂಗ್‌ ವಿಭಾಗಕ್ಕೆ ಅನುಭವಿ ಜೀವ ಕುಮಾರ್ ಶಕ್ತಿ ತುಂಬಿದ್ದಾರೆ. ಸಂದೀಪ್‌ ನರ್ವಾಲ್‌, ಮಂಜೀತ್ ಚಿಲ್ಲರ್, ನೀರಜ್ ನರ್ವಾಲ್, ಸುಶಾಂತ್ ಸೈಲ್‌ ಹಾಗೂ ನಿತಿನ್ ಪವಾರ್ ರೇಡಿಂಗ್‌ನಲ್ಲಿ ನವೀನ್‌ಗೆ ಸಹಕಾರ ನೀಡುತ್ತಿದ್ದಾರೆ.

ರಕ್ಷಣಾ ವಿಭಾಗದಲ್ಲಿ ಜೋಗಿಂದರ್ ನರ್ವಾಲ್, ಮೋಹಿತ್ ಬೇನ್ಸ್‌ವಾಲ್‌, ಸುಮಿತ್ ಬೇನ್ಸ್‌ವಾಲ್‌ ಅವರಿಗೆ ಸಂದೀಪ್ ನರ್ವಾಲ್ ಮತ್ತು ಮಂಜೀತ್ ಚಿಲ್ಲಾರ್ ಅವರ ಅನುಭವದ ನೆರವು ಇದೆ. ಕಳೆದ ಬಾರಿ ಫೈನಲ್‌ನಲ್ಲಿ ಎಡವಿದ ತಂಡ ಈ ಬಾರಿ ಯಶ‌ಸ್ಸು ಗಳಿಸುವುದೇ ಎಂಬುದು ಕುತೂಹಲ.

* ತಂಡದ ಈ ಬಾರಿಯ ಸಾಧನೆ ಖುಷಿ ತಂದಿದೆ. ಪ್ರತಿಯೊಬ್ಬರೂ ಅವರವರಿಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣ ಬದ್ಧತೆಯೊಂದಿಗೆ ನಿರ್ವಹಿಸಿದ್ದಾರೆ. ಫೈನಲ್‌ನಲ್ಲಿ ಆಡಲು ಕಾತರರಾಗಿದ್ದಾರೆ.

-ರಾಮ್‌ ಮೆಹರ್ ಸಿಂಗ್ ಪಟ್ನಾ ಪೈರೇಟ್ಸ್ ಕೋಚ್‌

* ಯಾವುದೇ ಸಂದರ್ಭದಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಮರ್ಥ್ಯ ಇರುವವರು ಪಟ್ನಾ ತಂಡದಲ್ಲಿದ್ದಾರೆ. ನಮ್ಮ ತಂಡವೂ ಬಲಿಷ್ಠವಾಗಿದೆ. ಫೈನಲ್‌ಗಾಗಿ ಸೂಕ್ತ ತಂತ್ರ ಹೆಣೆಯಲಾಗಿದೆ.

-ಕೃಷನ್ ಕುಮಾರ್ ಹೂಡಾ ದಬಂಗ್ ಡೆಲ್ಲಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.