ADVERTISEMENT

ಹೈದರಾಬಾದ್ ಹಂಟರ್ಸ್ ಶುಭಾರಂಭ

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಪುಣೆ ಸೆವೆನ್‌ ಏಸಸ್‌ ತಂಡಕ್ಕೆ ಮೊದಲ ದಿನದ ಎಲ್ಲ ಪಂದ್ಯಗಳಲ್ಲೂ ಸೋಲು

ಪಿಟಿಐ
Published 22 ಡಿಸೆಂಬರ್ 2018, 20:26 IST
Last Updated 22 ಡಿಸೆಂಬರ್ 2018, 20:26 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಮುಂಬೈ: ಪಿ.ವಿ.ಸಿಂಧು ನೇತೃತ್ವದ ಹೈದರಾಬಾದ್ ಹಂಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ (ಪಿಬಿಎಲ್‌) ನಾಲ್ಕನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ನ್ಯಾಷನಲ್‌ ಸ್ಪೋರ್ಟ್ಸ್ ಕ್ಲಬ್‌ ಆಫ್ ಇಂಡಿಯಾದ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಲೀಗ್‌ನ ಮೊದಲ ದಿನದ ಎಲ್ಲ ಪಂದ್ಯಗಳಲ್ಲೂ ಹಂಟರ್ಸ್ ಗೆದ್ದಿತು. ಟ್ರಂಪ್ ಪಂದ್ಯವನ್ನೂ ಸೋತ ಪುಣೆ ಸೆವೆನ್‌ ಏಸಸ್‌ ನಿರಾಸೆಗೆ ಒಳಗಾಯಿತು.

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರನ್ನು ಮಣಿಸಿದ ಮಾರ್ಕ್‌ ಕಲಿಜೊ, ಹಂಟರ್ಸ್‌ಗೆ ಮೊದಲ ಜಯ ತಂದುಕೊಟ್ಟರು. ನಂತರ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಕಿಮ್ ಸಾ ರಾಂಗ್ ಮತ್ತು ಬೋದಿನ್ ಇಸಾರ ಜೋಡಿ ಚಿರಾಗ್ ಶೆಟ್ಟಿ–ಮಥಾಯಸ್ ಬೋಯೆ ಅವರನ್ನು ಸೋಲಿಸಿತು.

ಮೊದಲ ಪಂದ್ಯದಲ್ಲೇ ಪ್ರೇಕ್ಷಕರು ರೋಮಾಂಚನಗೊಂಡರು. ಯುವ ಆಟಗಾರ, ಲಕ್ಷ್ಯ ಸೇನ್ ಮತ್ತು ನೆದರ್ಲೆಂಡ್ಸ್‌ನ ಮಾರ್ಕ್‌ ಕಲಿಜೊ ನಡುವಿನ ಪೈಪೋಟಿ ರೋಚಕವಾಗಿತ್ತು. ಪುಣೆ ಸೆವೆನ್ ಏಸಸ್ ಪರವಾಗಿ ಕಣಕ್ಕೆ ಇಳಿದ ಲಕ್ಷ್ಯ ಸೇನ್‌ ಮೊದಲ ಗೇಮ್‌ನಲ್ಲಿ ಎದುರಾಳಿಯನ್ನು ಮಣಿಸಿ ಸಂಭ್ರಮಿಸಿದರು. ಆದರೆ ಉಳಿದೆರಡು ಗೇಮ್‌ಗಳನ್ನು ಮಾರ್ಕ್‌ ಗೆದ್ದರು.

ADVERTISEMENT

ಆರಂಭದಿಂದಲೇ ಪ್ರಬಲ ಸ್ಮ್ಯಾಷ್ ಮತ್ತು ಮೋಹಕ ಡ್ರಾಪ್‌ಗಳ ಮೂಲಕ ರಂಜಿಸಿದ ಲಕ್ಷ್ಯ ಸೇನ್‌ಗೆ ಉತ್ತರಿಸಲು ಹೈದರಾಬಾದ್ ಹಂಟರ್ಸ್‌ನ ಮಾರ್ಕ್‌ ಪರದಾಡಿದರು. ಲಕ್ಷ್ಯ 15–10ರಿಂದ ಗೇಮ್ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ಮಾರ್ಕ್ ತಿರುಗೇಟು ನಿಡಿದರು. ಲಕ್ಷ್ಯ ಅವರ ತಂತ್ರಗಳಿಗೆ ಪ್ರತಿತಂತ್ರ ಹೂಡಿದ ಅವರು 15–12ರಿಂದ ಗೆದ್ದು ಸಮಬಲ ಸಾಧಿಸಿದರು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರು ಪ್ರಬಲ ಪೈಪೋಟಿ ನಡೆಸಿದರು. ಕೊನೆಯ ಹಂತದಲ್ಲಿ ಗೇಮ್‌ 13–13, 14–14ರಲ್ಲಿ ಸಮಗೊಂಡಿತು. ಆದರೆ ಛಲ ಬಿಡದ ಮಾರ್ಕ್‌ 15-14ರಿಂದ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಎರಡನೆಯದು ಪುಣೆ ಏಸಸ್‌ಗೆ ಟ್ರಂಪ್‌ ಪಂದ್ಯ ಆಗಿತ್ತು. ಹಂಟರ್ಸ್‌ ಪರ ಆಡಿದ ಕಿಮ್ ಸಾ ರಾಂಗ್ ಮತ್ತು ಬೋದಿನ್ ಇಸಾರ ಜೋಡಿ ಅಮೋಘ ಆಟವಾಡಿ 13–15, 15–10, 15–13 ಗೇಮ್‌ಗಳಿಂದ ಏಸಸ್‌ನ ಚಿರಾಗ್ ಶೆಟ್ಟಿ–ಮಥಾಯಸ್ ಬೋಯೆ ಅವರನ್ನು ಸೋಲಿಸಿದರು. ಮೂರನೇ ಪಂದ್ಯ ಹಂಟರ್ಸ್‌ನ ಟ್ರಂಪ್ ಆಗಿತ್ತು. ಫ್ರಾನ್ಸ್‌ನ ಬ್ರೈಸ್ ಲೆವರ್‌ಡೆಸ್ ಅವರನ್ನು 15–14, 15–12ರಿಂದ ಮಣಿಸಿ ದಕ್ಷಿಣ ಕೊರಿಯಾದ ಲೀ ಹ್ಯೂನ್ ಹಿಲ್‌ ಅವರು ಹಂಟರ್ಸ್‌ ಪಾಳಯದಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದರು.

ವಿಶ್ವ ಚಾಂಪಿಯನ್‌ ವಿರುದ್ಧ ಗೆದ್ದ ಸಿಂಧು: ಎರಡೂ ತಂಡಗಳ ನಾಯಕಿಯರ ಮುಖಾಮುಖಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿತ್ತು. ಚುರುಕಿನ ಆಟವಾಡಿದ ಪಿ.ವಿ.ಸಿಂಧು ಅವರು ಏಸಸ್‌ನ ನಾಯಕಿ, ವಿಶ್ವ ಚಾಂಪಿಯನ್‌ ಕ್ಯಾರೊಲಿನಾ ಮರಿನ್‌ ಅವರನ್ನು 15–11, 8–15, 15–13ರಿಂದ ಮಣಿಸಿ ತಂಡದ ಮುನ್ನಡೆಯನ್ನು 5–0ಗೆ ಹೆಚ್ಚಿಸಿದರು.

ಮೊದಲ ಗೇಮ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರದ ಮರಿನ್‌ ಎರಡನೇ ಗೇಮ್‌ನಲ್ಲಿ ಬಲಶಾಲಿ ಸ್ಮ್ಯಾಷ್‌ಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದರು. ತಿರುಗೇಟು ನೀಡಲು ಸಿಂಧು ನಡೆಸಿದ ಪ್ರಯತ್ನಗಳು ವಿಫಲಗೊಂಡವು. ಮೂರನೇ ಗೇಮ್‌ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿಯ ಹೋರಾಟ ನಡೆಸಿದರು.

ದೀರ್ಘ ರ‍್ಯಾಲಿಗಳ ಮೂಲಕ ಪಾಯಿಂಟ್ ಗಳಿಸಲು ಆಟಗಾರ್ತಿಯರು ಪ್ರಯತ್ನಿಸುತ್ತಿದ್ದಂತೆ ಪ್ರೇಕ್ಷಕರ ಕುತೂಹಲ ಹೆಚ್ಚಿತು. ಸ್ಮ್ಯಾಷ್‌ಗಳು ಮತ್ತು ಕ್ರಾಸ್ ಕೋರ್ಟ್ ಹೊಡೆತಗಳ ಮೂಲಕ ರಂಜಿಸಿದ ಸಿಂಧುಗೆ ಮರಿನ್ ಸಮರ್ಥ ಪ್ರತ್ಯುತ್ತರ ನೀಡಿದರು. ಹೀಗಾಗಿ ಗೇಮ್‌ ಕ್ಷಣ ಕ್ಷಣಕ್ಕೂ ರೋಚಕವಾಯಿತು. ಒಂದು ಹಂತದಲ್ಲಿ ಗೇಮ್‌ 13–13ರಲ್ಲಿ ಸಮ ಆಯಿತು. ನಂತರ ಎರಡು ಪಾಯಿಂಟ್‌ಗಳನ್ನು ಕಲೆ ಹಾಕಿದ ಸಿಂಧು ಜಯದ ನಗೆ ಬೀರಿದರು.

ಕೊನೆಯ ಪಂದ್ಯದಲ್ಲಿ ಕಿಮ್ ಸಾ ರಾಂಗ್– ಯಾಮ್ ಹೀ ವಾನ್‌ ಜೋಡಿ ವ್ಲಾಡಿಮಿರ್ ಇವಾನೊವ್‌–ಲಿನ್ ಜರೆಫೆಲ್ಟ್ ಜೋಡಿಯನ್ನು 15–14, 15–11ರಿಂದ ಗೆಲ್ಲುವ ಮೂಲಕ ಹಂಟರ್ಸ್ ಕ್ಲೀನ್ ಸ್ವೀಪ್ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.