ADVERTISEMENT

ಜ.20ರಿಂದ ಪಿಬಿಎಲ್‌

ಪಿಟಿಐ
Published 7 ಜನವರಿ 2020, 16:30 IST
Last Updated 7 ಜನವರಿ 2020, 16:30 IST
pbl
pbl   

ಚೆನ್ನೈ : ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಗೆ ಇದೇ ತಿಂಗಳ 20ರಂದು ಚಾಲನೆ ಸಿಗಲಿದೆ.

ಚೆನ್ನೈಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಪಿ.ವಿ.ಸಿಂಧು ಸಾರಥ್ಯದ ಹೈದರಾಬಾದ್‌ ಹಂಟರ್ಸ್‌ ಮತ್ತು ಆತಿಥೇಯ ಚೆನ್ನೈ ಸೂಪರ್‌ಸ್ಟಾರ್ಸ್‌ ತಂಡಗಳು ಸೆಣಸಲಿವೆ.

ಈ ಬಾರಿ 21 ದಿನಗಳ ಅವಧಿಯಲ್ಲಿ 24 ಪಂದ್ಯಗಳು ನಡೆಯಲಿವೆ. ಚೆನ್ನೈಯಲ್ಲಿ ಎರಡು ವರ್ಷಗಳ ನಂತರ ಪಂದ್ಯಗಳು ಆಯೋಜನೆಯಾಗಿವೆ.

ADVERTISEMENT

ಜನವರಿ 25ರಿಂದ ಲಖನೌ ಲೆಗ್‌ನ ಪಂದ್ಯಗಳು ಜರುಗಲಿದ್ದು, ಮೂರನೇ ಲೆಗ್‌ಗೆ (ಜನವರಿ 29ರಿಂದ ಫೆಬ್ರುವರಿ 4) ಹೈದರಾಬಾದ್‌ ಆತಿಥ್ಯ ವಹಿಸಲಿದೆ.

ಬೆಂಗಳೂರಿನಲ್ಲಿ (ಫೆಬ್ರುವರಿ 5ರಿಂದ 9) ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ಆಯೋಜನೆಯಾಗಿವೆ.

ಸಿಂಧು ನಾಯಕತ್ವದ ಹೈದರಾಬಾದ್‌ ಮತ್ತು ತೈ ಜು ಯಿಂಗ್‌ ಮುಂದಾಳತ್ವದ ಬೆಂಗಳೂರು ರ‍್ಯಾಪ್ಟರ್ಸ್‌ ನಡುವಣ ಹೋರಾಟ ಎಲ್ಲರ ಆಕರ್ಷಣೆಯಾಗಿದೆ. ಈ ಪಂದ್ಯ ಇದೇ ತಿಂಗಳ 31ರಂದು ನಡೆಯಲಿದೆ.

‘ಪಿಬಿಎಲ್‌ನಲ್ಲಿ ಆಡುವುದಕ್ಕೆ ಅತೀವ ಸಂತಸವಾಗುತ್ತದೆ. ಐದನೇ ಆವೃತ್ತಿಯಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌ ಪರ ಕಣಕ್ಕಿಳಿಯಲು ಕಾತರಳಾಗಿದ್ದೇನೆ. ಈ ಬಾರಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ವೀಕ್ಷಿಸುವ ವಿಶ್ವಾಸವಿದೆ. ಪಿ.ವಿ.ಸಿಂಧು ವಿರುದ್ಧ ಸೆಣಸಲು ಉತ್ಸುಕಳಾಗಿದ್ದೇನೆ’ ಎಂದು ತೈ ಜು ಯಿಂಗ್‌ ಹೇಳಿದ್ದಾರೆ.

₹ 6 ಕೋಟಿ ಬಹುಮಾನ ಮೊತ್ತದ ಈ ಲೀಗ್‌ನಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌, ಅವಧ್‌ ವಾರಿಯರ್ಸ್‌, ಮುಂಬೈ ರಾಕೆಟ್ಸ್‌, ಹೈದರಾಬಾದ್‌ ಹಂಟರ್ಸ್‌, ಚೆನ್ನೈ ಸೂಪರ್‌ಸ್ಟಾರ್ಸ್‌, ನಾರ್ತ್‌ಈಸ್ಟರ್ನ್‌ ವಾರಿಯರ್ಸ್‌ ಮತ್ತು ಪುಣೆ 7 ಏಸಸ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಪ್ರಮುಖ ಸಿಂಗಲ್ಸ್‌ ಸ್ಪರ್ಧಿಗಳಾದ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಐದನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಬೆಂಗಳೂರಿನ ತಂಡ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.