ADVERTISEMENT

ಪಿಬಿಎಲ್‌: ಚೆನ್ನೈ ಸ್ಮ್ಯಾಷರ್ಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:15 IST
Last Updated 3 ಜನವರಿ 2019, 20:15 IST
ಸಂಗ್ ಜಿ ಹ್ಯೂನ್
ಸಂಗ್ ಜಿ ಹ್ಯೂನ್   

ಅಹಮದಾಬಾದ್‌: ಅಡ್ಕಾಕ್ ದಂಪತಿ, ರಾಜೀವ್ ಔಸೇಪ್ ಮತ್ತು ಸಂಗ್ ಜಿ ಹ್ಯೂನ್ ಅವರ ಅಮೋಘ ಆಟದ ನೆರವಿನಿಂದ ಚೆನ್ನೈ ಸ್ಮ್ಯಾಷರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಗುರುವಾರದ ಹಣಾಹಣಿಯಲ್ಲಿ ಗೆದ್ದಿತು.

ಅರೆನಾ ಬೈ ಎಸ್‌ಸಿ ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆದ ಪಂದ್ಯಗಳಲ್ಲಿ ಚೆನ್ನೈ ತಂಡ ಪುಣೆ ಸೆವೆನ್ ಏಸಸ್ ವಿರುದ್ಧ 4–3ರಿಂದ ಗೆದ್ದಿತು.

ಗ್ಯಾಬಿ ಅಡ್ಕಾಕ್ ಮತ್ತು ಕ್ರಿಸ್ ಅಡ್ಕಾಕ್ ಜೋಡಿ ಮೊದಲ ಪಂದ್ಯದಲ್ಲಿ ವ್ಲಾಡಿಮಿರ್ ಇವಾನೊವ್‌ ಮತ್ತು ಲಿನ್‌ ಜಾರ್‌ಫೆಲ್ಟ್ ಜೋಡಿಯನ್ನು ಮಣಿಸಿ ಗೆಲುವು ತಂದುಕೊಟ್ಟರು. ಇದು ಟ್ರಂಪ್ ಪಂದ್ಯ ಆಗಿದ್ದುದರಿಂದ ತಂಡಕ್ಕೆ 2 ಪಾಯಿಂಟ್‌ಗಳು ಲಭಿಸಿದವು. ನಂತರ ಪುರುಷರ ಸಿಂಗಲ್ಸ್‌ನಲ್ಲಿ ಔಸೇಪ್‌, ಲೆವೆರ್ಡೆಸ್ ವಿರುದ್ಧ ಗೆದ್ದು ಮುನ್ನಡೆ ಹೆಚ್ಚಿಸಿದರು.

ADVERTISEMENT

ಕರೊಲಿನಾ ಮರಿನ್‌ಗೆ ಸೋಲು: ಮಹತ್ವದ ಮೂರನೇ ಪಂದ್ಯದಲ್ಲಿ ಕರೊಲಿನಾ ಮರಿನ್ ಅವರನ್ನು ಮಣಿಸುವ ಮೂಲಕ ಸಂಗ್ ಜಿ ಹ್ಯೂನ್ ಅವರು ಚೆನ್ನೈ ಬಳಗದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ರೋಚಕ ಮೊದಲ ಗೇಮ್‌ನಲ್ಲಿ 14–15ರಿಂದ ಸೋತ ಮರಿನ್‌ ಎರಡನೇ ಗೇಮ್‌ನಲ್ಲಿ 15–7ರ ಸುಲಭ ಜಯ ಸಾಧಿಸಿದರು. ಮೂರನೇ ಗೇಮ್‌ ಕೂಡ ರೋಮಾಂಚಕವಾಗಿತ್ತು. 15–13ರಿಂದ ಹ್ಯೂನ್ ಗೆದ್ದರು.

ಮುಂದಿನದ ಪುಣೆ ತಂಡದ ಟ್ರಂಪ್ ಪಂದ್ಯ ಆಗಿತ್ತು. ಚಿರಾಗ್ ರೆಡ್ಡಿ ಮತ್ತು ಇವಾನೊವ್‌ ಜೋಡಿ ಕ್ರಿಸ್ ಅಡ್ಕಾಕ್ ಮತ್ತು ಸುಮೀತ್ ರೆಡ್ಡಿ ಜೋಡಿಯನ್ನು ಮಣಿಸಿ ಪುಣೆಗೆ ಎರಡು ಪಾಯಿಂಟ್‌ ಗಳಿಸಿಕೊಟ್ಟರು. ಕೊನೆಯ, ಪುರುಷರ ಸಿಂಗಲ್ಸ್‌ನಲ್ಲಿ ಚಾಂಗ್ ವೀ ಫೆಂಗ್‌ ಎದುರು ಗೆದ್ದ ಅಜಯ್‌ ಜಯರಾಮ್‌ ಪುಣೆಯ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.