ADVERTISEMENT

ಪಿಕಲ್‌ಬಾಲ್ ಕಮಾಲ್...

ಗಿರೀಶ ದೊಡ್ಡಮನಿ
Published 14 ಸೆಪ್ಟೆಂಬರ್ 2025, 0:50 IST
Last Updated 14 ಸೆಪ್ಟೆಂಬರ್ 2025, 0:50 IST
ಪಿಕಲ್‌ಬಾಲ್‌ ಆಟದ ಗಮ್ಮತ್ತು...  ಚಿತ್ರಗಳು:ಕೃಷ್ಣ ಕುಮಾರ್‌ ಪಿ.ಎಸ್.
ಪಿಕಲ್‌ಬಾಲ್‌ ಆಟದ ಗಮ್ಮತ್ತು...  ಚಿತ್ರಗಳು:ಕೃಷ್ಣ ಕುಮಾರ್‌ ಪಿ.ಎಸ್.   

ಚೀನಾದಲ್ಲಿ ಹಂದಿ ಮಾಂಸದ ಖಾದ್ಯಗಳ ಸೇವನೆ ಹೆಚ್ಚಿದ ಹಿನ್ನೆಲೆಯಲ್ಲಿ ಬಾತುಕೋಳಿ ಸಾಕಣೆ ಕಡಿಮೆಯಾಗಿದೆ. ಅದಕ್ಕಾಗಿ ಬ್ಯಾಡ್ಮಿಂಟನ್ ಶಟಲ್‌ ಕಾಕ್‌ಗಳ ತಯಾರಿಕೆಗೆ ಕೋಳಿ ಪುಕ್ಕಗಳ ಕೊರತೆ ಕಾಡುತ್ತಿದೆ ಎಂಬ ಸಂಗತಿ ಇತ್ತೀಚೆಗೆ ಭಾರೀ ಸುದ್ದಿ ಮಾಡಿತ್ತು. ಪ್ರಾಣಿ, ಪಕ್ಷಿಗಳು ಮತ್ತು ಕ್ರೀಡೆಯ ನಂಟಿಗೆ ಇದೊಂದು ಉದಾಹರಣೆಯಷ್ಟೇ. ಆದರೆ ಒಂದು ಆಟಕ್ಕೆ ಸಾಕುನಾಯಿಯೊಂದರ ಹೆಸರಿಟ್ಟಿರುವ ಸ್ವಾರಸ್ಯವೂ ಇದೆ‌!

ಹೌದು; ಕಳೆದೊಂದು ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗುತ್ತಿರುವ ‘ಪಿಕಲ್‌ಬಾಲ್’ ಎಂಬುದು ಸಾಕುನಾಯಿಯೊಂದರ ಹೆಸರು. ಕರ್ನಾಟಕದಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಈ ಆಟವು ಸರ್ಕಾರದ ಯಾವುದೇ ಮಾನ್ಯತೆ, ಅನುದಾನಗಳಿಲ್ಲದಿದ್ದರೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ. ಅದಕ್ಕೆ ಕಾರಣ ಇದರಲ್ಲಿನ ‘ಫನ್, ಫಿಟ್‌ನೆಸ್‌ ಮತ್ತು ಕಾಂಪಿಟೇಷನ್’ನ ಅಂಶಗಳು. 12 ವರ್ಷದವರಿಂದ 80 ವರ್ಷದವರೆಗಿನವರೂ ಆಡುವಂತಹ ಆಟ ಇದು. ಒಂದು ರೀತಿಯಲ್ಲಿ ‘ಅಪ್ಪಟ ಕೌಟುಂಬಿಕ ಮನರಂಜನೆ’ಯ ಆಟ ಎಂದು ಕರ್ನಾಟಕ ಪಿಕಲ್‌ಬಾಲ್ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್‌ ಹೇಳುತ್ತಾರೆ.

ಬೆಂಗಳೂರಿನ ನಾಗರಬಾವಿಯ ಪಾಪರೆಡ್ಡಿ ಪಾಳ್ಯದಲ್ಲಿರುವ ಸಂಸ್ಥೆಯ ಪಿಕಲ್‌ಬಾಲ್ ಕೋರ್ಟ್‌ನಲ್ಲಿ ಅಭ್ಯಾಸ ಮಾಡುವ ಆಸಕ್ತರನ್ನು ತೋರಿಸುತ್ತ ಈ ಕ್ರೀಡೆಯ ಹುಟ್ಟು, ಬೆಳವಣಿಗೆ ಮತ್ತು ಕರ್ನಾಟಕಕ್ಕೆ ಬಂದ ಬಗೆಯನ್ನೂ ವಿವರಿಸಿದರು. ಅವರ ಮಾತುಗಳ ಹಿನ್ನೆಲೆಯಲ್ಲಿ ಪ್ಯಾಡಲ್‌ಗೆ ಚೆಂಡು ಬಡಿಯುವ ವಿಶಿಷ್ಟ ಸದ್ದು ಪ್ರತಿಧ್ವನಿಸುತ್ತಿತ್ತು. 

ADVERTISEMENT

ಈ ಆಟ ಜನಿಸಿದ್ದೇ ಕುಟುಂಬವೊಂದರ ಮನರಂಜನೆಗಾಗಿ. 1967ರಲ್ಲಿ ವಾಷಿಂಗ್ಟನ್‌ನ ಬೇನ್‌ಬ್ರಿಜ್ ಐಲ್ಯಾಂಡ್‌ನ ನಿವಾಸಿ ಜೊಯೆಲ್ ಪ್ರಿಚರ್ಡ್ ಮತ್ತು ಅವರ ಇಬ್ಬರು ಸ್ನೇಹಿತರಾದ ಬಾರ್ನಿ ಮೆಕ್ಲಂ ಮತ್ತು ಬಿಲ್ ಬೆಲ್ ಅವರು ಪಿಕಲ್‌ಬಾಲ್ ಆಟವನ್ನು ರೂಪುಗೊಳಿಸಿದವರು.

ಪ್ರಿಚರ್ಡ್ ಅವರ ಮಕ್ಕಳು ಬೇಸಿಗೆ ರಜೆಯಲ್ಲಿ ಕಾಲ ಕಳೆಯಲು ಯಾವುದಾದರೂ ಆಟ ಆಡಬೇಕು ಎಂದು ಹಟ ಹಿಡಿಯುತ್ತಾರೆ. ಅದಕ್ಕಾಗಿ ಪ್ರಿಚರ್ಡ್ ಅವರು ಬ್ಯಾಡ್ಮಿಂಟನ್ ಆಡಿಸಲು ಪ್ರಯತ್ನಿಸಿದರು. ಆದರೆ ಮನೆಯಂಗಳದಲ್ಲಿ (ಹೊರಾಂಗಣ) ಆಡಲು ವಿಪರೀತ ಗಾಳಿ ಇದ್ದ ಕಾರಣ ಆಡಲು ಸಾಧ್ಯವಾಗಲಿಲ್ಲ. ಟೆನಿಸ್‌ ಆಡಲು ಕೂಡ ಜಾಗ ಸಾಲಲಿಲ್ಲ. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಇದ್ದ ಜಾಗದಲ್ಲಿಯೇ ಲಾನ್ ಟೆನಿಸ್ ರೀತಿಯಲ್ಲಿ ಅಂಕಣ ನಿರ್ಮಿಸಿದರು. ನೆಟ್ ಕೂಡ ಟೆನಿಸ್ ರೀತಿಯಲ್ಲಿಯೇ ಕಟ್ಟಿದರು. ಪ್ಲಾಸ್ಟಿಕ್ ಬಾಲ್ ತಂದರು. ಟೇಬಲ್ ಟೆನಿಸ್ ರೆಕೆಟ್‌ಗಳಲ್ಲಿ ಆಡತೊಡಗಿದರು. ರೆಕೆಟ್ ದೊಡ್ಡದಿದ್ದರೆ ಚೆಂದ ಎಂದು ಅವರಿಗೆ ಅನಿಸಿತು. ತಾವೇ ಪ್ಲೈವುಡ್‌ನಲ್ಲಿ ಟಿಟಿ ಬ್ಯಾಟ್‌ಗಿಂತ ದೊಡ್ಡದನ್ನು ಸಿದ್ಧಗೊಳಿಸಿದರು. ಅದಕ್ಕೆ ಪ್ಯಾಡಲ್ ಎಂದು ಕರೆದರು. ಆದ್ದರಿಂದ ಇದನ್ನು ಪ್ಯಾಡಲ್ ಬಾಲ್ ಎಂದೂ ಕರೆಯುತ್ತಾರೆ. ಅಂಕಣದಿಂದ ಚೆಂಡು ಹೊರಬಿದ್ದಾಗ ಪ್ರಿಚರ್ಡ್ ಅವರ ಸಾಕುನಾಯಿ ತನ್ನ ಬಾಯಲ್ಲಿ ಕಚ್ಚಿಕೊಂಡು ಬಂದು ಕೊಡುತ್ತಿತ್ತು. ಅದರ ಹೆಸರು ಪಿಕಲ್. ಪ್ರಿಚರ್ಡ್ ದಂಪತಿಯು ಈ ಆಟಕ್ಕೆ ತಮ್ಮ ಮುದ್ದಿನ ನಾಯಿಯ ಹೆಸರನ್ನೇ ಇಟ್ಟರಂತೆ. ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪಿಕಲ್‌ಬಾಲ್ ಬೆಳೆಯತೊಡಗಿತು. ವಿಶೇಷವಾಗಿ ಅಮೆರಿಕ, ಯುರೋಪ್‌ ದೇಶಗಳಲ್ಲಿ ಕೌಟುಂಬಿಕ ಮನರಂಜನೆ ಮತ್ತು ಫಿಟ್‌ನೆಸ್ ಕ್ರೀಡೆಯಾಗಿ ಜನಪ್ರಿಯವಾಗಿದೆ.

‘ನಾನು ವಾಲಿಬಾಲ್ ಆಟಗಾರ. ರಾಜ್ಯ, ರಾಷ್ಟ್ರ ತಂಡದೊಂದಿಗೆ ಪ್ರವಾಸಮಾಡಿರುವೆ. ಆ ಸಂದರ್ಭದಲ್ಲಿ ಅಮೆರಿಕದಲ್ಲಿ ನೋಡಿದೆ. ವಾಲಿಬಾಲ್‌ ಆಟದೊಳಗಿನ ರಾಜಕೀಯ, ಅವ್ಯವಸ್ಥೆಗಳನ್ನು ನೋಡಿ ದೂರ ಸರಿದೆ. ಆದರೆ ಹೊಸದೊಂದು ಆಟವನ್ನು ನಮ್ಮ ಸ್ನೇಹಿತರ ಬಳಗಕ್ಕೆ ಪರಿಚಯಿಸುವ ಹಂಬಲ ಇತ್ತು. ಲೆಗ್‌ ಕ್ರಿಕೆಟ್ ಸೇರಿದಂತೆ ಹಲವು ಆಟಗಳನ್ನು ಪರೀಕ್ಷಿಸಿದೆವು. ಕೊನೆಗೆ ಗಟ್ಟಿಯಾಗಿ ಸೆಳೆದಿದ್ದು ಮಾತ್ರ ಪಿಕಲ್‌ಬಾಲ್’ ಎಂದು ರಜತ್ ಹೇಳಿದರು. 

‘ಈ ಆಟವನ್ನು ನಾವು ಇಲ್ಲಿ ಆರಂಭಿಸಿದಾಗ ಗೇಲಿ ಮಾಡಿದವರೇ ಹೆಚ್ಚು. ಇದೆಂತಹ ಆಟ ಎಂದು ಅಪಹಾಸ್ಯ ಮಾಡಿದ್ದರು. ಆದರೆ ಇವತ್ತು ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳಲ್ಲಿ 29 ಅಕಾಡೆಮಿಗಳಿವೆ. 400ಕ್ಕೂ ಹೆಚ್ಚು ಕೋರ್ಟ್‌ಗಳಿವೆ. ರಾಜ್ಯದ್ಯಂತ ಐದು ಸಾವಿರ ಜನ ಆಡುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಂಟು ಜಿಲ್ಲಾ ಸಂಸ್ಥೆಗಳು ಇವೆ. ಬೆಂಗಳೂರಿನಲ್ಲಿ ಪ್ರತಿ ವಾರವೂ ಒಂದಿಲ್ಲೊಂದು ಕಡೆ ಸ್ಪರ್ಧೆಗಳು ಇರುತ್ತವೆ. ಒಂದು ಲಕ್ಷ ರೂಪಾಯಿಯಷ್ಟು ನಗದು ಬಹುಮಾನಗಳೂ ಇರುವುದು ವಿಶೇಷ. ನಮ್ಮಲ್ಲಿ ಹೊಟೇಲ್ ಉದ್ಯಮಿಯೊಬ್ಬರು ಪತ್ನಿ ಹಾಗೂ  ಮಕ್ಕಳು ಜೊತೆಯಾಗಿ ಆಡುತ್ತಾರೆ. 64 ವರ್ಷದವರೊಬ್ಬರು ಪ್ರತಿನಿತ್ಯ ಒಂದೆರಡು ಗಂಟೆ ಇಲ್ಲಿ ಆಡುತ್ತಾರೆ. ಅವರ ಫಿಟ್‌ನೆಸ್, ಚಾಕಚಕ್ಯತೆ ನಮಗೆಲ್ಲ ಸ್ಫೂರ್ತಿ’ ಎಂದು ಅವರು ಹೇಳಿದರು. 

ಸದ್ಯ ಬೆಂಗಳೂರಿನ ಕೆಎಸ್‌ಪಿಎನಲ್ಲಿ 19 ವರ್ಷದವರಿಂದ ಆರಂಭವಾಗಿ 64 ವರ್ಷದೊಳಗಿನ  ಆಟಗಾರರು ಇದ್ದಾರೆ. ಈ ಆಟಕ್ಕೆ ಬೇಕಾದ ಸಾಮಗ್ರಿಗಳಾದ ಪ್ಯಾಡಲ್ (ಬ್ಯಾಟ್), ರಂಧ್ರಗಳಿರುವ ಸಿಂಥೆಟಿಕ್ ಮಿಶ್ರಿತ ಪ್ಲಾಸ್ಟಿಕ್ ಚೆಂಡುಗಳು ತಯಾರಾಗುವುದು ಚೀನಾದಲ್ಲಿ. ಆದರೆ ಮಾರಾಟವನ್ನು ಅಮೆರಿಕದ ಕಂಪನಿಗಳು ಮಾಡುತ್ತವೆ. ದಶಕದ ಹಿಂದೆ ಅಲ್ಲಿಂದ ತರಿಸಿ ಇಲ್ಲಿಯ ಆಸಕ್ತರಿಗೆ ಉಚಿತವಾಗಿ ನೀಡಿ ಆಡುವಂತೆ ಮಾಡಿದ್ದು ಈ ಸಂಘಟನೆಯ ಪದಾಧಿಕಾರಿಗಳು. ಈಗ ಭಾರತದಲ್ಲಿ ಸಲಕರಣೆಗಳು ಸಿಗುತ್ತಿವೆ. ಆದರೆ ಉತ್ಪಾದನೆ ಇನ್ನೂ ಉತ್ಕೃಷ್ಠ ಗುಣಮಟ್ಟ ಮುಟ್ಟಿಲ್ಲ. ಒಂದು ಪ್ಯಾಡಲ್‌ಗೆ 2,500 ರೂಪಾಯಿಂದ ಆರಂಭವಾಗಿ 20 ಸಾವಿರದವರೆಗೂ ಇವೆ. ಒಂದು ಚೆಂಡಿಗೆ 200 ರೂಪಾಯಿವರೆಗೂ ಇದೆ. ಸದ್ಯ ರಾಜ್ಯ ಸಂಸ್ಥೆಗೆ ಎ.ಜಿ. ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ.

‘ನಾವೆಲ್ಲ ಒಂದೇ ಪ್ರದೇಶದ ನಿವಾಸಿಗಳು. ಪ್ರತಿದಿನ ಎರಡು ತಾಸು ಪಿಕಲ್‌ಬಾಲ್ ಆಡದೇ ಹೋದರೆ ಸಮಾಧಾನವೇ ಇಲ್ಲ. ವ್ಯಾಯಾಮಕ್ಕೆ ವ್ಯಾಯಾಮ, ಮನಸ್ಸಿಗೆ ನೆಮ್ಮದಿ ಮತ್ತು ಈ ವಯಸ್ಸಿನಲ್ಲಿಯೂ ಫಿಟ್ ಆಗಿದ್ದೇನೆ’ ಎಂದು ಸುರೇಶ್ ಬಾಬು ಸಂತಸದಿಂದ ಹೇಳುತ್ತಾರೆ. 

ಅವರಷ್ಟೇ ಅಲ್ಲ; ಕಲಬುರಗಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ವರುಣ್ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದವರು. ಅವರು ಕೂಡ ಪಿಕಲ್‌ಬಾಲ್‌ಗೆ ಮಾರುಹೋಗಿದ್ದಾರೆ. 21 ವರ್ಷದೊಳಗಿನ ವಿಭಾಗದಲ್ಲಿ ಆಡುವ ಹರಿಪ್ರಿಯಾ, ಜೂನಿಯರ್ ಆಟಗಾರ ಅನಿಲ್ ಕುಮಾರ್, 53 ವರ್ಷದ ನಾಗೇಂದ್ರ ಅವರಂತಹ ಉತ್ಸಾಹಿಗಳೂ ಇಲ್ಲಿದ್ದಾರೆ. 

‘ಕೆಲವು ಖಾಸಗಿ ಅಕಾಡೆಮಿಗಳು ಪ್ರತಿ ಗಂಟೆಗೆ ₹500 ರಿಂದ ₹ 1,200ವರೆಗೂ ಶುಲ್ಕ ಪಡೆಯುತ್ತಿವೆ. ಇದರಿಂದಾಗಿ ಈ ಆಟವು ಕೇವಲ ಉಳ್ಳವರಿಗಾಗಿ ಎನ್ನುವಂತಾಗುತ್ತಿದೆ. ಆದರೆ ಮಧ್ಯಮ ವರ್ಗದವರು ಹೆಚ್ಚು ಭಾಗವಹಿಸುವಂತಾಗಬೇಕು. ಅದಕ್ಕಾಗಿ ಅಧಿಕ ಶುಲ್ಕಕ್ಕೆ ಕಡಿವಾಣ ಹಾಕುವತ್ತ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಕೈಗೆಟಕುವ ಶುಲ್ಕ ನಿಗದಿಪಡಿಸುವುದು ಮತ್ತು ನಮ್ಮದೇ ಸಂಸ್ಥೆಯಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಕೋರ್ಟ್‌ಗಳನ್ನು ನಿರ್ಮಿಸಿ ಕೊಡುವ ಉದ್ದೇಶವಿದೆ’ ಎಂದೂ ರಜತ್ ಹೇಳುತ್ತಾರೆ.

ಪಿಕಲ್‌ಬಾಲ್‌ ಆಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.