ADVERTISEMENT

ಸೂಪರ್‌ಬೆಟ್‌ ಕ್ಲಾಸಿಕ್ ಚೆಸ್‌ | ಮುನ್ನಡೆ ಹಂಚಿಕೊಂಡ ಪ್ರಜ್ಞಾನಂದ

ಪಿಟಿಐ
Published 14 ಮೇ 2025, 16:07 IST
Last Updated 14 ಮೇ 2025, 16:07 IST
ಪ್ರಜ್ಞಾನಂದ
ಪ್ರಜ್ಞಾನಂದ   

ಬುಕಾರೆಸ್ಟ್‌: ಪೋಲೆಂಡ್‌ನ ಯಾನ್‌ ಶಿಸ್ತೋಫ್‌ ದೂಡ ಅವರ ಜೊತೆ ಡ್ರಾ ಮಾಡಿಕೊಂಡ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಅವರು ಸೂಪರ್‌ಬೆಟ್‌ ಚೆಸ್‌ ಕ್ಲಾಸಿಕ್‌ ಟೂರ್ನಿಯ ಆರನೇ ಸುತ್ತಿನ ನಂತರ 3.5 ಪಾಯಿಂಟ್ಸ್‌ ಸಂಗ್ರಹಿಸಿ ಇತರ ಮೂರು ಮಂದಿಯ ಜೊತೆ  ಮುನ್ನಡೆ ಹಂಚಿಕೊಂಡಿದ್ದಾರೆ. ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಮಂಗಳವಾರ ತೀವ್ರ ಹೋರಾಟದ ಪಂದ್ಯದಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಝ್‌ಜಾ ಎದುರು ಸೋಲನುಭವಿಸಿದರು.

ಪ್ರಜ್ಞಾನಂದ ಜೊತೆ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌, ಅಲಿರೇಝಾ ಫಿರೋಝ್‌ಜಾ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ಅವರೂ ತಲಾ 3.5 ಪಾಯಿಂಟ್ ಗಳಿಸಿದ್ದಾರೆ. ಹತ್ತು ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯು ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿದೆ.

ಗುಕೇಶ್ ಅವರಿಗೆ ಇದು ಟೂರ್ನಿಯಲ್ಲಿ ಎರಡನೇ ಸೋಲು. ಅವರು ಲೈವ್‌ ರ‍್ಯಾಂಕಿಂಗ್ಸ್‌ನಲ್ಲಿ ಐದನೇ ಸ್ಥಾನಕ್ಕೆ ಸರಿದಿದ್ದಾರೆ. ಅರ್ಜುನ್ ಇರಿಗೇಶಿ  ಮೂರನೇ ಸ್ಥಾನಕ್ಕೇರಿದ್ದಾರೆ.

ADVERTISEMENT

ಕರುವಾನ ಅವರು ಸ್ಥಳೀಯ ಆಟಗಾರ ಡೇಕ್ ಬೊಗ್ದಾನ್– ಡೇನಿಯಲ್ (2.5) ಅವರ ರಕ್ಷಣೆ ಛಿದ್ರಗೊಳಿಸಲು ಮುಂದಾದರೂ ಯಶಸ್ಸು ಪಡೆಯದೇ ಡ್ರಾಕ್ಕೆ ಒಪ್ಪಿಕೊಳ್ಳಬೇಕಾಯಿತು.

ಬಿಳಿ ಕಾಯಿಗಳಲ್ಲಿ ಆಡಿದ ವೇಷಿಯರ್ ಲಗ್ರಾವ್ ಅವರು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ (2) ಜೊತೆ ಬೇಗನೇ ಡ್ರಾ ಮಾಡಿಕೊಂಡರು. ಅಮೆರಿಕದ ಲೆವೊನ್ ಅರೋನಿಯನ್ (3), ಸ್ವದೇಶದ ವೆಸ್ಲಿ ಸೊ (3) ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.