ಪ್ರಾಗ್ (ಝೆಕ್ ರಿಪಬ್ಲಿಕ್): ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯಲ್ಲಿ ಸಾಧಿಸಿದ ರೋಚಕ ಗೆಲುವಿನಿಂದ ವಿಶ್ವಾಸದಲ್ಲಿರುವ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಬುಧವಾರ ಇಲ್ಲಿ ಆರಂಭವಾಗುವ ಪ್ರಾಗ್ ಮಾಸ್ಟರ್ಸ್ ಟೂರ್ನಿಯಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ.
ಟಾಟಾ ಮಾಸ್ಟರ್ಸ್ ಟೂರ್ನಿಯ ಅಗ್ರಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಪ್ರಜ್ಞಾನಂದ ತೀವ್ರ ಹೋರಾಟ ತೋರಿ ಅಂತಿಮವಾಗಿ ಟೈಬ್ರೇಕರ್‌ನಲ್ಲಿ ಸ್ವದೇಶದ ದೊಮ್ಮರಾಜು ಗುಕೇಶ್ ಅವರನ್ನು ಸೋಲಿಸಿದ್ದರು.
ಗ್ರ್ಯಾಂಡ್‌ಮಾಸ್ಟರ್ ಅರವಿಂದ ಚಿದಂಬರಮ್ ಅವರು ಮೊದಲ ಬಾರಿ ಈ ಟೂರ್ನಿಯಲ್ಲಿ ಆಡಲಿದ್ದಾರೆ. 2024ರಲ್ಲಿ ಅವರು ಸ್ಥಿರ ಪ್ರದರ್ಶನ ನೀಡಿ ರೇಟಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದರು. 2730 ಲೈವ್ ರೇಟಿಂಗ್ ಹೊಂದಿರುವ ಅರವಿಂದ್ ಅಗ್ರ 20ರೊಳಗೆ ಸ್ಥಾನ ಪಡೆಯುವ ಹೊಸ್ತಿಲಲ್ಲಿದ್ದಾರೆ.
ಗುಕೇಶ್, ಅರ್ಜುನ್ ಇರಿಗೇಶಿ, ವಿಶ್ವ ಚಾಂಪಿಯನ್ ಪ್ರಜ್ಞಾನಂದ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಈಗಾಗಲೇ ಅಗ್ರ 20ರಲ್ಲಿರುವ ಭಾರತದ ಆಟಗಾರರಾಗಿದ್ದಾರೆ.
ಫೆ. 1ರ ರೇಟಿಂಗ್ ಆಧಾರದಲ್ಲಿ ಚೀನಾದ ಗ್ರ್ಯಾಂಡ್‌ಮಾಸ್ಟರ್ ವಿ ಯೀ ಅವರು ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಪ್ರಜ್ಞಾನಂದ ಎರಡನೇ ಮತ್ತು ವಿಯೆಟ್ನಾಮಿನ ಲಿ ಕ್ವಾಂಗ್ ಲೀಮ್ ಮೂರನೇ ಶ್ರೇಯಾಂಕದ ಹೊಂದಿದ್ದಾರೆ. ಅರವಿಂದ್ ಅವರು ನಾಲ್ಕನೇ ಶ್ರೇಯಾಂಕದ ಹೊಂದಿದ್ದಾರೆ.
ಸೈದ್ಧಾಂತಿಕವಾಗಿ ಪ್ರಬಲ ಆಟಗಾರ ಅನಿಶ್ ಗಿರಿ ಕೂಡ ಇಲ್ಲಿ ಆಡಲಿದ್ದಾರೆ. ಡೇವಿಡ್ ನವರಾ ಸ್ಥಳೀಯ ಅಗ್ರ ಆಟಗಾರ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.