ADVERTISEMENT

ರ‍್ಯಾಪಿಡ್‌ ಚೆಸ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ ತಲುಪಲು ಪ್ರಜ್ಞಾನಂದ ವಿಫಲ

ಏರ್‌ಥಿಂಗ್ಸ್ ಮಾಸ್ಟರ್ಸ್‌ ಆನ್‌ಲೈನ್ ರ‍್ಯಾಪಿಡ್‌ ಚೆಸ್‌ ಟೂರ್ನಿ

ಪಿಟಿಐ
Published 23 ಫೆಬ್ರುವರಿ 2022, 14:32 IST
Last Updated 23 ಫೆಬ್ರುವರಿ 2022, 14:32 IST
ಆರ್‌. ಪ್ರಜ್ಞಾನಂದ– ಎಎಫ್‌ಪಿ ಚಿತ್ರ
ಆರ್‌. ಪ್ರಜ್ಞಾನಂದ– ಎಎಫ್‌ಪಿ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌. ಪ್ರಜ್ಞಾನಂದ ಅವರು ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್ ಟೂರ್ನಿಯ ಕೊನೆಯ ಸುತ್ತಿನಲ್ಲಿ ಗೆಲುವು ಸಾಧಿಸಿದರೂ ಕ್ವಾರ್ಟರ್‌ಫೈನಲ್‌ ತಲುಪಲು ವಿಫಲರಾದರು. ಇದರೊಂದಿಗೆ ಟೂರ್ನಿಯಲ್ಲಿ 11ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು.

16 ವರ್ಷದ ಪ್ರಜ್ಞಾನಂದ ಅವರು 15ನೇ ಹಾಗೂ ಕೊನೆಯ ಸುತ್ತಿನಲ್ಲಿ ರಷ್ಯಾದ ವ್ಲಾಡಿಸ್ಲಾವ್‌ ಅರ್ಟಿಮೆವ್‌ ಎದುರು ಗೆದ್ದರು. ಇದಕ್ಕೂ ಮೊದಲು 13ನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್‌ ಕೇಮರ್‌ ಅವರೊಂದಿಗೆ ಡ್ರಾ ಸಾಧಿಸಿದರೆ, 14ನೇ ಸುತ್ತಿನಲ್ಲಿ ಅಮೆರಿಕದ ಹ್ಯಾನ್ಸ್ ಮೊಕ್ಕೊ ನೀಮನ್ ಎದುರು ಸೋಲು ಅನುಭವಿಸಿದರು.

ಎಂಟನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಅವರನ್ನು ಮಣಿಸಿದ್ದ ಪ್ರಜ್ಞೇಶ್ ಸಂಚಲನ ಸೃಷ್ಟಿಸಿದ್ದರು. ಆದರೆ ಅಸ್ಥಿರ ಆಟದಿಂದಾಗಿ ಅವರು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.

ADVERTISEMENT

ಪ್ರಜ್ಞಾನಂದ ಒಟ್ಟು 19 ಪಾಯಿಂಟ್ಸ್ ಕಲೆಹಾಕಿದರು.15 ಸುತ್ತುಗಳ ಪೈಕಿ ಐದರಲ್ಲಿ ಮಾತ್ರ ಅವರಿಗೆ ಗೆಲುವು ದಕ್ಕಿತು. ಅಗ್ರ ಎಂಟು ಸ್ಥಾನ ಗಳಿಸಿದವರು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಿದರು ಕಾರ್ಲ್‌ಸನ್‌, ಅಗ್ರ 10ರೊಳಗಿನ ರ‍್ಯಾಂಕಿನ ಲೆವ್ ಅರೋನಿಯನ್‌, ಆ್ಯಂಡ್ರೆ ಎಸಿಪೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್‌ ಅಲೆಕ್ಸಾಂಡ್ರಾ ಕೊಸ್ತೆನಿಕ್‌ ಮತ್ತು ಕೇಮರ್ ಅವರು ಪ್ರಜ್ಞಾನಂದ ವಿರುದ್ಧ ಸೋತವರು.

ಪ್ರಿಲಿಮನರಿ ಸುತ್ತುಗಳ ಬಳಿಕ ರಷ್ಯಾದ ಇಯಾನ್ ನೆಪೊಮ್ನಿಯಾಚಿ 29 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. ಕಾರ್ಲ್‌ಸನ್‌ (25) ಮತ್ತು ಅರ್ಟೆಮಿವ್‌ (24) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.