ಪ್ರಾಗ್: ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಭಾನುವಾರ ಸ್ವದೇಶದ ಅರವಿಂದ ಚಿದಂಬರಮ್ ಜೊತೆ ಡ್ರಾ ಮಾಡಿಕೊಂಡರು. ಇಬ್ಬರೂ ತಲಾ 3.5 ಪಾಯಿಂಟ್ಸ್ ಗಳಿಸಿದ್ದು ಜಂಟಿಯಾಗಿ ಅಗ್ರಸ್ಥಾನವದಲ್ಲಿ ಮುಂದುವರಿದಿದ್ದಾರೆ.
ಈ ಇಬ್ಬರು ಆಟಗಾರರನ್ನು ಬೆನ್ನತ್ತಿರುವ ಅಗ್ರ ಶ್ರೇಯಾಂಕದ ವೀ ಯಿ (ಚೀನಾ), ಹಾಲೆಂಡ್‌ನ ಅನಿಶ್ ಗಿರಿ, ವಿಯೆಟ್ನಾಇನ ಕ್ವಾಂಗ್ ಲೀಮ್ ಲಿ ಮತ್ತು ಜರ್ಮನಿಯ ವಿನ್ಸೆಂಟ್ ಕೀಮರ್ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಝೆಕ್ ರಿಪಬ್ಲಿಕ್‌ನ ಡೇವಿಡ್ ನವಾರ, ಗ್ಯುಯೆನ್ ಥಾಯ್ ದೈವಾನ್, ಅಮೆರಿಕದ ಸ್ಯಾಮ್ ಶಂಕ್ಲಾಂಡ್ ಮತ್ತು ಟರ್ಕಿಯ ಗುರೆಲ್ ಎಡಿಜ್ ತಲಾ ಎರಡು ಪಾಯಿಂಟ್ಸ್ ಗಳಿಸಿದ್ದಾರೆ.
ಹತ್ತು ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಇನ್ನೂ 4 ಸುತ್ತುಗಳು ಆಡಲು ಉಳಿದಿವೆ. ಐದನೇ ಸುತ್ತಿನಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಜಯಾಪಜಯ ನಿರ್ಧಾರವಾಯಿತು. ಉತ್ತಮ ಆಟ ಕಂಡುಕೊಳ್ಳಲು ಪರದಾಡುತ್ತಿದ್ದ ವೀ ಯಿ ಐದನೇ ಸುತ್ತಿನಲ್ಲಿ ಅಮೆರಿಕದ ಶಂಕ್ಲಾಂಡ್ ಅವರನ್ನು 27 ನಡೆಗಳಲ್ಲಿ ಮಣಿಸಿದರು. ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು.
ಡೇವಿಡ್ ನವಾರ, ವಿನ್ಸೆಂಟ್ ಕೀಮರ್ ಜೊತೆ, ಕ್ವಾಂಗ್ ಲೀಮ್ ಲಿ, ಗುರೆಜ್ ಎಡಿಜ್ ಜೊತೆ; ಅನಿಶ್ ಗಿರಿ, ಗುಯೆನ್ ಥಾಯ್ ವಾನ್ ಜೊತೆ ಡ್ರಾ ಮಾಡಿಕೊಂಡರು.
ಚಾಲೆಂಜರ್ ವಿಭಾಗದಲ್ಲಿ ಭಾರತದ ದಿವ್ಯಾ ದೇಶಮುಖ್ (1.5) ಐದು ಸುತ್ತುಗಳಲ್ಲಿ ಮೂರನೇ ಬಾರಿ ಸೋಲು ಕಂಡರು. ನೊದಿರ್ಬೆಕ್ ಯಾಕುಬ್ಬೋವ್ (4 ಪಾಯಿಂಟ್) ಅವರು ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸೋಮವಾರದ ವಿಶ್ರಾಂತಿ ದಿನದ ನಂತರ ಮಂಗಳವಾರ ಆರನೇ ಸುತ್ತು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.