ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎಂಟರಘಟ್ಟಕ್ಕೆ ಪ್ರಣಯ್‌, ಸಾತ್ವಿಕ್– ಚಿರಾಗ್

ತ್ರಿಶಾ–ಗಾಯತ್ರಿಗೆ ಸೋಲು

ಪಿಟಿಐ
Published 12 ಜನವರಿ 2023, 13:32 IST
Last Updated 12 ಜನವರಿ 2023, 13:32 IST
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ  – ಎಎಫ್‌ಪಿ ಚಿತ್ರ
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ  – ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ರೋಚಕ ಪೈಪೋಟಿಯಲ್ಲಿ ಗೆದ್ದ ಭಾರತದ ಎಚ್‌.ಎಸ್‌. ಪ್ರಣಯ್ ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎಂಟರಘಟ್ಟ ತಲುಪಿದರು. ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಯೂ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಪ್ರಣಯ್‌ 21-9, 15-21, 21-16ರಿಂದ ಇಂಡೊನೇಷ್ಯಾದ ಚಿಕೊ ಔರಾ ದ್ವಿ ವರ್ದೊಯೊ ಅವರ ಸವಾಲು ಮೀರಿದರು. ಒಂದು ತಾಸು ನಾಲ್ಕು ನಿಮಿಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ಎಂಟನೇ ರ‍್ಯಾಂಕಿನ ಆಟಗಾರ ಗೆಲುವಿನ ನಗೆ ಬೀರಿದರು.

ಪ್ರಣಯ್ ಅವರು ಎರಡನೇ ಬಾರಿ ಚಿಕೊ ಎದುರು ಪಂದ್ಯವಾಡಿದರು. 2018ರ ಸಯ್ಯದ್‌ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಪ್ರಣಯ್‌ ಸೋಲನುಭವಿಸಿದ್ದರು. ಈ ಪಂದ್ಯದಲ್ಲಿ ಪ್ರಣಯ್‌ ಹೊಡೆತಗಳ ಆಯ್ಕೆಯಲ್ಲಿ ಜಾಣತನ ಮೆರೆದರು. ಕ್ರಾಸ್‌– ಕೋರ್ಟ್‌ ಸ್ಮ್ಯಾಷ್‌ಗಳಲ್ಲಿ ಚುರುಕುತನ ತೋರಿದರು.

ADVERTISEMENT

30 ವರ್ಷದ ಪ್ರಣಯ್ ಅವರು ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಎನ್‌ಜಿ ಜೆ ಯಾಂಗ್‌ ಅಥವಾ ಜಪಾನ್‌ನ ಕೊಡಾಯಿ ನರವೊಕಾ ಅವರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನ 16ರ ಘಟ್ಟದ ಪಂದ್ಯದಲ್ಲಿ ಸಾತ್ವಿಕ್‌– ಚಿರಾಗ್‌ 21-19, 22-20ರಿಂದ ಇಂಡೊನೇಷ್ಯಾದ ಶೊಹಿಬುಲ್ ಫಿಕ್ರಿ ಮತ್ತು ಬಾಗಸ್‌ ಮೌಲಾನ ಅವರನ್ನು ಸೋಲಿಸಿದರು.

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮಹಿಳಾ ಡಬಲ್ಸ್ ಜೋಡಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಪ್ರೀಕ್ವಾರ್ಟರ್‌ನಲ್ಲಿ 13–21, 21–15, 17–21ರಿಂದ ಬಲ್ಗೇರಿಯಾದ ಗೇಬ್ರಿಯೇಲಾ ಸ್ಟೊಯೆವಾ– ಸ್ಟೆಫಾನಿ ಸ್ಟೊಯೆವಾ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.