ADVERTISEMENT

ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 15:43 IST
Last Updated 18 ಜೂನ್ 2022, 15:43 IST

ಜಕಾರ್ತ: ಭಾರತದ ಎಚ್‌.ಎಸ್‌.ಪ್ರಣಯ್‌ ಅವರು ಇಂಡೊನೇಷ್ಯಾ ಸೂಪರ್‌ ಸೀರಿಸ್ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದರು.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಪ್ರಣಯ್ 16–21, 15–21 ರಲ್ಲಿ ಚೀನಾದ ಜುನ್‌ ಪೆಂಗ್‌ ಎದುರು ಪರಾಭವಗೊಂಡರು.

ಎರಡೂ ಗೇಮ್‌ಗಳಲ್ಲಿ ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದ ಪ್ರಣಯ್‌, 40 ನಿಮಿಷಗಳಲ್ಲಿ ಸೋಲು ಒಪ್ಪಿಕೊಂಡರು. ಇಂಡೊನೇಷ್ಯಾ ಓಪನ್ ಟೂರ್ನಿಯಲ್ಲಿ ತಮ್ಮ ಎರಡನೇ ಸೆಮಿಫೈನಲ್‌ ಆಡಿದ ಅವರು ಮೊದಲ ಗೇಮ್‌ನ ಆರಂಭದಲ್ಲೇ 6–11 ರಲ್ಲಿ ಹಿನ್ನಡೆ ಅನುಭವಿಸಿದರು.

ADVERTISEMENT

ಆ ಬಳಿಕ ಕೆಲಹೊತ್ತು ಮರುಹೋರಾಟದ ಸೂಚನೆ ನೀಡಿದ ಹಿನ್ನಡೆಯನ್ನು 14–16ಕ್ಕೆ ತಗ್ಗಿಸಿದರು. ಆದರೆ ಎದುರಾಳಿಗೆ ಹೆಚ್ಚಿನ ಅವಕಾಶ ನೀಡದ ಜುನ್‌ ಮೇಲಿಂದ ಮೇಲೆ ಪಾಯಿಂಟ್ ಕಲೆಹಾಕಿ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಫೈನಲ್‌ಗೆ ಲಗ್ಗೆಯಿಟ್ಟರು.

ಜುನ್‌ ಪೆಂಗ್‌ ಅವರು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ಅಗ್ರ ರ್‍ಯಾಂಕಿಂಗ್‌ನ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ಸವಾಲು ಎದುರಿಸಲಿದ್ದಾರೆ. ಅಕ್ಸೆಲ್ಸೆನ್‌ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ 19-21, 21-11, 23-21 ರಲ್ಲಿ ಮಲೇಷ್ಯಾದ ಲೀ ಜಿ ಜಿಯಾ ಎದುರು ಪ್ರಯಾಸದ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.