ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ಪ್ರಣಯ್‌

ಲಿನ್‌ ಡಾನ್‌ ವಿರುದ್ಧ ಅಚ್ಚರಿ ಜಯ

ಪಿಟಿಐ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
ಷಟಲ್‌ಕಾಕ್‌ ಹಿಂದಿರುಗಿಸುತ್ತಿರುವ ಎಚ್‌.ಎಸ್‌.ಪ್ರಣಯ್‌ -ರಾಯಿರ್ಟಸ್‌ ಚಿತ್ರ
ಷಟಲ್‌ಕಾಕ್‌ ಹಿಂದಿರುಗಿಸುತ್ತಿರುವ ಎಚ್‌.ಎಸ್‌.ಪ್ರಣಯ್‌ -ರಾಯಿರ್ಟಸ್‌ ಚಿತ್ರ   

ಬಾಸೆಲ್‌, ಸ್ವಿಟ್ಜರ್ಲೆಂಡ್‌: ಒಲಿಂಪಿಕ್ಸ್ ಚಿನ್ನ ವಿಜೇತ ಚೀನಾದ ಲಿನ್‌ ಡಾನ್‌ಗೆ ಆಘಾತ ನೀಡಿದ ಭಾರತದ ಎಚ್‌.ಎಸ್‌.ಪ್ರಣಯ್‌ ಅವರು ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ಪ್ರಣಯ್‌, 21–11, 13–21, 21–7 ಗೇಮ್‌ಗಳಿಂದ ಗೆದ್ದರು. ಹಲವು ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನೂ ಧರಿಸಿರುವ ಲಿನ್‌, ಒಂದು ತಾಸು ಎರಡು ನಿಮಿಷಗಳ ಆಟದಲ್ಲಿ ಪ್ರಣಯ್‌ಗೆ ಶರಣಾದರು.

ಮೊದಲ ಗೇಮ್‌ನಲ್ಲಿ ಪ್ರಣಯ್‌ ಸಂಪೂರ್ಣ ಪ್ರಾಬಲ್ಯ ಮೆರೆದರು. 2–2ರ ಸಮಬಲದಲ್ಲಿ ಸಾಗಿದ್ದ ಗೇಮ್‌ನಲ್ಲಿ ಭಾರತದ ಆಟಗಾರ 10–5 ಮುನ್ನಡೆ ಗಳಿಸಿದರು. ಆ ಬಳಿಕ ಮುನ್ನಡೆ 19–11ಕ್ಕೆ ತಲುಪಿ ಅಂತಿಮವಾಗಿ ಗೇಮ್‌ ಸುಲಭವಾಗಿ ಜಯಿಸಿದರು.

ADVERTISEMENT

2008ರ ಒಲಿಂಪಿಕ್ಸ್ ಚಾಂಪಿಯನ್‌ ಲಿನ್‌ ಎರಡನೇ ಗೇಮ್‌ನಲ್ಲಿ ಗರ್ಜಿಸಿದರು. ಆರಂಭದಲ್ಲಿ 5–5 ಗೇಮ್‌ಗಳಿಂದ ಸಾಗಿದ್ದ ಗೇಮ್‌ನಲ್ಲಿ ಲಿನ್‌ ಮುನ್ನಡೆ ಹೆಚ್ಚಿಸುತ್ತಾ ಸಾಗಿದರು. ಗೇಮ್‌ ವಶಕ್ಕೆ ತೆಗೆದುಕೊಂಡರು. ಉತ್ಸಾಹ ಕಳೆದುಕೊಳ್ಳದ ಪ್ರಣಯ್‌, ಮೂರನೇ ಹಾಗೂ ನಿರ್ಣಾಯಕ ಗೇಮ್‌ ಗೆದ್ದು ಸಂಭ್ರಮದ ಅಲೆಯಲ್ಲಿ ತೇಲಿದರು.

ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಪ್ರಣಯ್‌ ಅವರು, ಜಪಾನ್‌ನ ಕೆಂಟೊ ಮೊಮೊಟಾ ಹಾಗೂ ಸ್ಪೇನ್‌ನ ಲೂಯಿಸ್‌ ಎನ್ರಿಕ್‌ ಪೆನಾಲ್ವರ್‌ ನಡುವಣ ಪಂದ್ಯದಲ್ಲಿ ಗೆದ್ದವರನ್ನು ಎದುರಿಸುವರು.

ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ–ಎನ್‌. ಸಿಕ್ಕಿರೆಡ್ಡಿ ಜೋಡಿ ವಾಕ್‌ಓವರ್‌ ಪಡೆಯಿತು. ಚೀನಾ ತೈಪೆಯ ಚಾಂಗ್‌ ಚಿಂಗ್‌ ಹುಯ್‌–ಯಾಂಗ್‌ ಚಿಂಗ್‌ ಟುನ್‌ ವಿರುದ್ಧ ಅವರು ಆಡಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.