ADVERTISEMENT

ಕಬಡ್ಡಿ: ತಲೈವಾಸ್ ವಿರುದ್ಧ ಪಟ್ನಾ ಜಯಭೇರಿ

ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಿಂಚಿದ ಜೈದೀಪ್, ರಾಹುಲ್ ಚೌಧರಿ

ಪಿಟಿಐ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
ಪಟ್ನಾ ಪೈರೇಟ್ಸ್ ತಂಡದ ಜಾಂಗ್ ಕುನ್ ಲೀ ಅವರು ತಮಿಳ್ ತಲೈವಾಸ್ ಆಟಗಾರರಿಂದ ತಪ್ಪಿಸಿಕೊಂಡರು
ಪಟ್ನಾ ಪೈರೇಟ್ಸ್ ತಂಡದ ಜಾಂಗ್ ಕುನ್ ಲೀ ಅವರು ತಮಿಳ್ ತಲೈವಾಸ್ ಆಟಗಾರರಿಂದ ತಪ್ಪಿಸಿಕೊಂಡರು   

ಮುಂಬೈ: ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ‍ಪಟ್ನಾ ಪೈರೇಟ್ಸ್ ತಂಡ ತಮಿಳ್ ತಲೈವಾಸ್ ಎದುರು ಒಂದು ಪಾಯಿಂಟ್ ಅಂತರದ ಜಯ ಗಳಿಸಿತು.

ಇಲ್ಲಿನ ರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ ಸೋಮವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ‍ಪಟ್ನಾ ಪೈರೇಟ್ಸ್‌ 24 ಪಾಯಿಂಟ್ ಕಲೆ ಹಾಕಿದರೆ ತಲೈವಾಸ್ 23 ಪಾಯಿಂಟ್ ಗಳಿಸಿ ಸೋಲೊಪ್ಪಿಕೊಂಡಿತು.

‍ಪಂದ್ಯದ ಮೊದಲ ರೇಡ್ ಮಾಡಿದ್ದು ತಲೈವಾಸ್‌. ರಾಹುಲ್ ಚೌಧರಿ ಬರಿಗೈಯೊಂದಿಗೆ ಮರಳಿದ್ದರು. ಆದರೆ ಎದುರಾಳಿ ತಂಡದ ಮೊದಲ ರೇಡ್ ಮಾಡಿದ ಪ್ರದೀಪ್ ನರ್ವಾಲ್ ಅವರನ್ನು ಟ್ಯಾಕಲ್ ಮಾಡಿ ಮಂಜೀತ್ ಚಿಲ್ಲಾರ್ ಅವರು ತಲೈವಾಸ್‌ಗೆ ಮೊದಲ ಪಾಯಿಂಟ್ ಗಳಿಸಿಕೊಟ್ಟರು. ಅಜಯ್ ಠಾಕೂರ್ ಯಶಸ್ವಿ ರೇಡ್ ಮಾಡಿ ತಲೈವಾಸ್‌ನ ಮುನ್ನಡೆ ಹೆಚ್ಚಿಸಿದರು.

ADVERTISEMENT

ಜಾಂಗ್ ಕುನ್ ಲೀ ಅವರನ್ನು ಕೂಡ ಹಿಡಿದ ಮಂಜೀತ್ ಚಿಲ್ಲಾರ್ ಮತ್ತೊಂದು ಪಾಯಿಂಟ್ ತಂದುಕೊಟ್ಟರು. 0–4ರ ಹಿನ್ನಡೆ ಅನುಭವಿಸಿದ್ದಲ್ಲಿಂದ ಪಾಯಿಂಟ್ ಗಳಿಸಲು ಆರಂಭಿಸಿದ ಪಟ್ನಾ ನಂತರ ಸಮಬಲದ ಹೋರಾಟ ನಡೆಸಿತು. ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗ ಉಭಯ ತಂಡಗಳು ತಲಾ 11 ಪಾಯಿಂಟ್ ಗಳಿಸಿದ್ದವು.

ಕುತೂಹಲ ಕೆರಳಿಸಿದ ದ್ವಿತೀಯಾರ್ಧ: ದ್ವಿತೀಯಾರ್ಧದ ಮೊದಲ ನಾಲ್ಕು ರೇಡ್‌ಗಳಲ್ಲಿ ಯಾವ ತಂಡಕ್ಕೂ ಪಾಯಿಂಟ್ ಗಳಿಸಲು ಆಗಲಿಲ್ಲ. ನಂತರ ಪೈರೇಟ್ಸ್ 13–12, 14–13ರಲ್ಲಿ ಮುನ್ನಡೆಯಿತು. ಈ ಅಂತರ 16–13ಕ್ಕೇರಿತು. ಆದರೆ ತಿರುಗೇಟು ನೀಡಿದ ತಲೈವಾಸ್ ಸತತ ಮೂರು ಪಾಯಿಂಟ್ ಗಳಿಸಿ 16–16ರ ಸಮಬಲ ಸಾಧಿಸಿತು.

ಈ ಹಂತದಿಂದ ಪಂದ್ಯ ಇನ್ನಷ್ಟು ಕುತೂಹಲಕಾರಿ ಕ್ಷಣಗಳಿಗೆ ಸಾಕ್ಷಿಯಾಯಿತು. ನಾಲ್ಕು ಪಾಯಿಂಟ್ ಗಳಿಸಿ ಪಟ್ನಾ 20–16ರ ಮುನ್ನಡೆ ಸಾಧಿಸಿದರೆ ಪಟ್ಟು ಬಿಡದ ತಲೈವಾಸ್ 18–20ರಿಂದ ಹಿನ್ನಡೆ ತಗ್ಗಿಸಿಕೊಂಡಿತು. ಕೊನೆಯ ರೇಡ್ ಸಂದರ್ಭದಲ್ಲಿ ತಲೈವಾಸ್‌ನ ಹಿನ್ನಡೆ 21–24 ಆಗಿತ್ತು. ಪ್ರದೀಪ್ ನರ್ವಾಲ್ ಅವರನ್ನು ಸೂಪರ್ ಟ್ಯಾಕಲ್ ಮೂಲಕ ಕೆಡವಿದ ಅಜಿತ್ ಎರಡು ಪಾಯಿಂಟ್ ಕಲೆ ಹಾಕಿ ಸೋಲಿನ ಅಂತರವನ್ನು ತಗ್ಗಿಸಿಕೊಂಡರು.

ವಿಜಯಿ ತಂಡದ ಪರ ಜೈದೀಪ್ ಏಳು ಪಾಯಿಂಟ್ ಗಳಿಸಿದರೆ ಮೊಹಮ್ಮದ್ ಇಸ್ಮಾಯಿಲ್ ಮತ್ತು ಹಾದಿ ಒಸ್ಟರಾಕ್ ತಲಾ ಎರಡು ಪಾಯಿಂಟ್ ಗಳಿಸಿದರು.

ಬೆಂಗಾಲ್ ವಾರಿಯರ್ಸ್‌ಗೆ ಜಯ: ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ 43–23ರಲ್ಲಿ ಪುಣೇರಿ ಪಲ್ಟನ್ ಎದುರು ಗೆದ್ದಿತು. ಬೆಂಗಾಲ್ ಪರ ಮಣಿಂದರ್ ಸಿಂಗ್‌, ಮೊಹಮ್ಮದ್ ನಬಿ ಭಕ್ಷ್‌ ಮತ್ತು ರಿಂಕು ಕ್ರಮವಾಗಿ 14, 8 ಮತ್ತು 5 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.