ADVERTISEMENT

ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ: ಆ.5ರಿಂದ ಆರಂಭ

ಪ್ರಶಸ್ತಿ ಚಿತ್ತ; ಬಲಿಷ್ಠ ಆಟಗಾರರತ್ತ ನೋಟ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 12:58 IST
Last Updated 4 ಆಗಸ್ಟ್ 2022, 12:58 IST
ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಪವನ್ ಶೆರಾವತ್‌ ರೇಡ್‌
ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಪವನ್ ಶೆರಾವತ್‌ ರೇಡ್‌   

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಟೂರ್ನಿಯ ಒಂಬತ್ತನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು, ಬಲಿಷ್ಠ ಆಟಗಾರರನ್ನು ಸೆಳೆಯಲು 12 ಫ್ರಾಂಚೈಸ್‌ಗಳು ಪ್ರಯತ್ನಿಸಲಿವೆ.

ಮುಂಬೈನಲ್ಲಿ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ. ಹೊಸ ಯುವ ಆಟಗಾರರು (ಎನ್‌ವೈಪಿ), ದೇಶಿ ಆಟಗಾರರು ಮತ್ತು ವಿದೇಶಿ ಆಟಗಾರರು ಎಂಬ ವಿಭಾಗಗಳಲ್ಲಿಹರಾಜುನಡೆಯಲಿದೆ. ಪ್ರತಿ ಫ್ರಾಂಚೈಸ್‌ಗಳು ₹ 4.4 ಕೋಟಿ ವೆಚ್ಚ ಮಾಡಬಹುದಾಗಿದೆ.

ಆಟಗಾರರನ್ನು ಎ,ಬಿ,ಸಿ ಮತ್ತು ಡಿ ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ವಿಭಾಗದವರಿಗೆ ಗರಿಷ್ಠ ಮೂಲ ಬೆಲೆ ₹ 30 ಲಕ್ಷ ಸಿಗಲಿದೆ. ‘ಬಿ’ ವಿಭಾಗದವರಿಗೆ ₹ 20 ಲಕ್ಷ, ‘ಸಿ’ ವಿಭಾಗದವರಿಗೆ ₹ 10 ಲಕ್ಷ ಮತ್ತು ‘ಡಿ’ ವಿಭಾಗದವರಿಗೆ ₹ 6 ಲಕ್ಷ ಸಿಗಲಿದೆ.

ADVERTISEMENT

ಬೆಂಗಳೂರು ಬುಲ್ಸ್ ತಂಡವು ತಾರಾ ಆಟಗಾರ ಪವನ್‌ಕುಮಾರ್ ಶೆರಾವತ್ ಅವರನ್ನು ಬಿಡುಗಡೆ ಮಾಡಿದ್ದು, ಮಹೇಂದರ್ ಸಿಂಗ್‌, ಮಯೂರ್ ಕದಂ ಮತ್ತು ಜಿ.ಬಿ. ಮೋರೆ ಅವರನ್ನು ಉಳಿಸಿಕೊಂಡಿದೆ.

500ಕ್ಕಿಂತ ಹೆಚ್ಚು ಆಟಗಾರರು ಹರಾಜಿಗೆ ಲಭ್ಯವಿದ್ದಾರೆ. ಈ ವರ್ಷ ಬೆಂಗಳೂರಿನಲ್ಲಿ ನಡೆದ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ ತಂಡಗಳ 24 ಆಟಗಾರರೂ ಇದರಲ್ಲಿ ಸೇರಿದ್ದಾರೆ.

ಮಶಾಲ್‌ ಸ್ಪೋರ್ಟ್ಸ್ ಆಯೋಜಿಸುವ ಟೂರ್ನಿಯು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಡೆಯುವ ನಿರೀಕ್ಷೆಯಿದೆ.

500+ :ಹರಾಜಿಗೆ ಲಭ್ಯ ಇರುವ ಆಟಗಾರರು

111 :ತಂಡಗಳಲ್ಲಿ ಉಳಿದುಕೊಂಡಿರುವವರು

25 : ತಂಡಗಳ ಗರಿಷ್ಠ ಆಟಗಾರರ ಸಂಖ್ಯೆ

18 :ತಂಡಗಳ ಕನಿಷ್ಠ ಆಟಗಾರರ ಸಂಖ್ಯೆ

ಬಿಡುಗಡೆಗೊಂಡಿರುವ ಪ್ರಮುಖ ಆಟಗಾರರು

ಪವನ್ ಶೆರಾವತ್‌ (ಬೆಂಗಳೂರು ಬುಲ್ಸ್),ಪ್ರದೀಪ್ ನರ್ವಾಲ್‌ (ಯುಪಿ ಯೋಧಾ),ಅಭಿಷೇಕ್ ಸಿಂಗ್‌ (ಯು ಮುಂಬಾ), ವಿಕಾಸ್‌ ಖಂಡೋಲ (ಹರಿಯಾಣ ಸ್ಟೀಲರ್ಸ್), ದೀಪಕ್ ಹೂಡಾ (ಜೈಪುರ ಪಿಂಕ್ ಪ್ಯಾಂಥರ್ಸ್), ಸುರ್ಜಿತ್ ಸಿಂಗ್ (ತಮಿಳ್ ತಲೈವಾಸ್‌), ನಿತಿನ್ ತೋಮರ್ (ಪುಣೇರಿ ಪಲ್ಟನ್‌), ಜೋಗಿಂದರ್ ನರ್ವಾಲ್‌ (ದಬಾಂಗ್‌ ಡೆಲ್ಲಿ), ರೋಹಿತ್ ಕುಮಾರ್ (ತೆಲುಗು ಟೈಟನ್ಸ್)

ಹರಾಜು

ಆಗಸ್ಟ್ 5 ಮತ್ತು 6

ಸ್ಥಳ: ಮುಂಬೈ

ಆರಂಭ: ಸಂಜೆ 6.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.