ADVERTISEMENT

ಬೆಂಗಳೂರು ಬುಲ್ಸ್‌ಗೆ ‘ದ್ವಿತೀಯ’ ಸೋಲು

ಪ್ರೊ ಕಬಡ್ಡಿ ಲೀಗ್‌: ಮಿಂಚಿನ ರೇಡಿಂಗ್ ಮಾಡಿದ ನವೀನ್, ಪವನ್‌

ವಿಕ್ರಂ ಕಾಂತಿಕೆರೆ
Published 24 ಆಗಸ್ಟ್ 2019, 20:00 IST
Last Updated 24 ಆಗಸ್ಟ್ 2019, 20:00 IST
ಎದುರಾಳಿ ತಂಡದ ಡಿಫೆಂಡರ್‌ಗಳಿಂದ ತಪ್ಪಿಸಿಕೊಂಡು ಪಾಯಿಂಟ್ ಗಳಿಸಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್‌
ಎದುರಾಳಿ ತಂಡದ ಡಿಫೆಂಡರ್‌ಗಳಿಂದ ತಪ್ಪಿಸಿಕೊಂಡು ಪಾಯಿಂಟ್ ಗಳಿಸಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್‌   

ನವದೆಹಲಿ: ಸೋಲಿನ ದವಡೆಯಿಂದ ಮೇಲೆದ್ದು ಗೆಲುವಿನ ತೋರಣ ಕಟ್ಟಿದ ದಬಂಗ್ ಡೆಲ್ಲಿ ತಂಡತವರಿನ ಪ್ರೇಕ್ಷಕರಿಗೆ ರಸದೌತಣ ನೀಡಿತು. ದೆಹಲಿ ಹುಡುಗ ಪವನ್ ಶೆರಾವತ್ (17 ಪಾ.) ಮತ್ತು ಯುವ ಪ್ರತಿಭೆ ನವೀನ್ ಕುಮಾರ್‌ (13 ಪಾಯಿಂಟ್ಸ್‌) ಚಾಕಚಕ್ಯ ಆಟದ ಮೂಲಕ ಕಬಡ್ಡಿ ಪ್ರಿಯರಿಗೆ ಮುದ ನೀಡಿದರು. ದ್ವಿತೀಯಾರ್ಧದಲ್ಲಿ ಎಡವಟ್ಟು ಮಾಡಿದ ಬೆಂಗಳೂರು ಬುಲ್ಸ್‌ ಸತತ ಎರಡನೇ ಸೋಲಿನೊಂದಿಗೆ ನಿರಾಸೆ ಅನುಭವಿಸಿತು.

ತ್ಯಾಗರಾಜ ಕ್ರೀಡಾ ಸಂಕೀರ್ಣದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ ದೆಹಲಿ ಲೆಗ್‌ನ ಮೊದಲ ಪಂದ್ಯದಲ್ಲಿಬೆಂಗಳೂರು ಬುಲ್ಸ್‌ ವಿರುದ್ಧ ಆತಿಥೇಯರು 33–31ರ ಜಯ ಸಾಧಿಸಿದರು. 19ನೇ ಬಾರಿ ‘ಸೂಪರ್‌ ಟೆನ್‌’ ಸಾಧನೆ ಮಾಡಿದ ಬುಲ್ಸ್‌ನಪವನ್ ಶೆರಾವತ್ ಮೊದ ಲಾರ್ಧದ ಪೂರ್ತಿ ಆಧಿಪತ್ಯ ಸ್ಥಾಪಿಸಿದರೆ ದ್ವಿತೀಯಾರ್ಧದಲ್ಲಿ ಡೆಲ್ಲಿಯನವೀನ್‌ ಕುಮಾರ್‌ ಚಾಣಾಕ್ಷ ಆಟವಾಡಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಪವನ್‌ ಶೆರಾವತ್‌ ಪ್ರೊ ಕಬಡ್ಡಿಯಲ್ಲಿ 700 ಪಾಯಿಂಟ್‌ಗಳನ್ನು ಗಳಿಸಿದ ಸಾಧನೆಯನ್ನೂ ಮಾಡಿದರು.

ಮೊದಲಾರ್ಧದಲ್ಲಿ ಪವನ್‌ಗೆ ಪ್ರತಿಯಾಗಿ ಎದುರಾಳಿ ತಂಡದವವರು ನವೀನ್ ಕುಮಾರ್ ಅವರನ್ನು ಸತತವಾಗಿ ದಾಳಿಗೆ ಇಳಿಸಿದರು. ಆದರೆ ಸೌರಭ್‌ ನಂದಾಲ್‌, ಬಂಟಿ ಮತ್ತು ಮಹೇಂದರ್ ಸಿಂಗ್ ಅವರ ಟ್ಯಾಕ್ಲಿಂಗ್ ಸಾಮರ್ಥ್ಯದ ಮುಂದೆ ಡೆಲ್ಲಿಯ ತಂತ್ರ ಫಲಿಸಲಿಲ್ಲ. ಲೀಗ್‌ನಲ್ಲಿ 50ನೇ ಪಂದ್ಯ ಆಡಿದ ಚಂದ್ರನ್ ರಂಜಿತ್ ಅವರಿಗೂ ಮಿಂಚಲು ಆಗಲಿಲ್ಲ. 10ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿದಾಗ ಬೆಂಗಳೂರು 12–6ರ ಮುನ್ನಡೆ ಸಾಧಿಸಿತ್ತು.ನಂತರ ಚೇತರಿಸಿಕೊಂಡ ಆತಿಥೇಯರು ವಿರಾಮದ ವೇಳೆ ಹಿನ್ನಡೆಯನ್ನು 11–19ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ADVERTISEMENT

ದ್ವಿತೀಯಾರ್ಧದಲ್ಲಿ ಬದಲಾದ ಚಿತ್ರಣ:ದ್ವಿತೀಯಾರ್ಧದಲ್ಲಿ ಡೆಲ್ಲಿ ತೀವ್ರ ಪೈಪೋಟಿ ನೀಡಿತು. ರೇಡಿಂಗ್‌ನಲ್ಲಿ ನವೀನ್‌ ಏಕಾಂಗಿ ಹೋರಾಟ ನಡೆಸಿದರು. ವಿಶಾಲ್ ಮಾನೆ ಮತ್ತು ನಾಯಕ ಜೋಗಿಂದರ್ ಸಿಂಗ್‌ ಸಾಮರ್ಥ್ಯ ತೋರಿದರು. ಹೀಗಾಗಿ ಅಂತಿಮ 7 ನಿಮಿಷ ಬಾಕಿ ಇದ್ದಾಗ ಡೆಲ್ಲಿಯ ಹಿನ್ನಡೆ 20–24ಕ್ಕೆ ಕುಗ್ಗಿತು. ನಾಲ್ಕು ನಿಮಿಷ ಇದ್ದಾಗ ನವೀನ್‌ ಕುಮಾರ್ 15ನೇ ‘ಸೂಪರ್ ಟೆನ್‌’ಗೊಂಚಲು ತಮ್ಮದಾಗಿಸಿ ಕೊಂಡರು.ಈ ಮೂಲಕ ತಂಡ 23–24ರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದರು. ಮೂರು ನಿಮಿಷಗಳಿದ್ದಾಗ ಆಲ್‌ ಔಟ್ ಆದ ಬುಲ್ಸ್‌ ಮೊದಲ ಬಾರಿ ಎದುರಾಳಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟಿತು. ನಂತರ ಮ್ಯಾಟ್‌ನಲ್ಲಿ ನಡೆದದ್ದೆಲ್ಲವೂ ರೋಚಕ, ಮೋಹಕ. ಮುನ್ನಡೆಯ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಡೆಲ್ಲಿ ಜಯ ಗಳಿಸಿ ಕೇಕೆ ಹಾಕಿತು.

ಟೈಟನ್ಸ್‌ಗೆ 3ನೇ ಜಯ: ಮತ್ತೊಂದು ಪಂದ್ಯದಲ್ಲಿ ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು 24–21ರಲ್ಲಿ ಸೋಲಿಸಿದ ತೆಲುಗು ಟೈಟನ್ಸ್ ಲೀಗ್‌ನಲ್ಲಿ ಮೂರನೇ ಜಯ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.