ADVERTISEMENT

ಪ್ರೊ ಕಬಡ್ಡಿ ಲೀಗ್‌: ಅತ್ರಾಚಲಿ ಆಟದಲ್ಲಿ ಅರಳಿದ ಜಯ

ಯು ಮುಂಬಾ ತಂಡದ ಪ್ರಾಬಲ್ಯ: ತೆಲುಗು ಟೈಟನ್ಸ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:25 IST
Last Updated 10 ಸೆಪ್ಟೆಂಬರ್ 2019, 20:25 IST
ಮುಂಬಾ ತಂಡದ ರಕ್ಷಣಾ ಆಟಗಾರ ಸಂದೀಪ್‌ ನರ್ವಾಲ್‌, ಟೈಟನ್ಸ್‌ ತಂಡದ ರೇಡರ್‌ ಫರ್ಹಾದ್‌ ಅವರನ್ನು ಹಿಡಿಯಲು ಯತ್ನಿಸಿದರು.
ಮುಂಬಾ ತಂಡದ ರಕ್ಷಣಾ ಆಟಗಾರ ಸಂದೀಪ್‌ ನರ್ವಾಲ್‌, ಟೈಟನ್ಸ್‌ ತಂಡದ ರೇಡರ್‌ ಫರ್ಹಾದ್‌ ಅವರನ್ನು ಹಿಡಿಯಲು ಯತ್ನಿಸಿದರು.   

ಕೋಲ್ಕತ್ತ: ಇರಾನ್‌ನ ಆಟಗಾರ ಫಜಲ್‌ ಅತ್ರಾಚಲಿ ರಕ್ಷಣಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ‘ಸುಲ್ತಾನ್‌’ ಗಳಿಸಿದ ಆರು ಪಾಯಿಂಟ್‌ಗಳ ನೆರವಿನಿಂದ ಎರಡನೇ ಆವೃತ್ತಿಯ ಚಾಂಪಿಯನ್‌ ಆಗಿದ್ದ ಯು ಮುಂಬಾ ತಂಡ ಮಂಗಳವಾರ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 41–27 ಪಾಯಿಂಟ್‌ಗಳಿಂದತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿತು.

ಸುಭಾಷಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅತ್ರಾಚಲಿ ರಕ್ಷಣಾ ವಿಭಾಗದಲ್ಲಿ ಒಳ್ಳೆಯ ಹೊಂದಾಣಿಕೆ ಪ್ರದರ್ಶಿಸಿ ತಂಡ ಆರಂಭದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ನೆರವಾದರು. ಈ ಗೆಲುವಿನಿಂದ ಮುಂಬಾ ತಂಡ 42 ಪಾಯಿಂಟ್‌ಗಳೊಡನೆ ಐದನೇ ಸ್ಥಾನಕ್ಕೆ ಜಿಗಿಯಿತು.

ಮುಂಬಾ ತಂಡದ ಪ್ರಮುಖ ರೇಡರ್‌ ಅಭಿಷೇಕ್‌ ಸಿಂಗ್‌ ಪರದಾಡಿದರೂ, ಅರ್ಜುನ್‌ ದೇಶ ವಾಲ್‌ ಆ ಕೊರತೆಯನ್ನು ನೀಗಿಸಿ ಉತ್ತಮ ದಾಳಿಗಳನ್ನು ನಡೆಸಿ 10 ಪಾಯಿಂಟ್‌ಗಳನ್ನು ಗಳಿಸಿದರು.

ADVERTISEMENT

ಫಜಲ್‌ ಅತ್ರಾಚಲಿ ಜೊತೆಗೆ ಸಂದೀಪ್‌ ನರ್ವಾಲ್‌ ಮತ್ತು ಸುರೀಂ ದರ್‌ ಸಿಂಗ್ ಅವರನ್ನು ಒಳಗೊಂಡ ರಕ್ಷಣಾ ವಿಭಾಗ ಎದುರಾಳಿ ರೇಡರ್‌ ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಿಲ್ಲ. ಈ ಹಿಂದೆ ಮುಂಬಾ ತಂಡದಲ್ಲೇ ಆಡಿದ್ದ ಟೈಟನ್ಸ್‌ನ ಪ್ರಮುಖ ರೈಡರ್‌ ಸಿದ್ಧಾರ್ಥ ‘ಬಾಹುಬಲಿ’ ದೇಸಾಯಿ ಮತ್ತೊಮ್ಮೆ ಹಳೆಯ ತಂಡದ ವಿರುದ್ಧ ಮಿಂಚುವಲ್ಲಿ ವಿಫಲರಾದರು.

ಎರಡೂ ತಂಡಗಳು ಎಚ್ಚರಿಕೆಯ ಆರಂಭ ಮಾಡಿದ್ದವು. ಸಿದ್ಧಾರ್ಥ ಆರಂಭದಲ್ಲಿ ಕೆಲವು ರೇಡ್‌ಗಳಲ್ಲಿ ಗಮನ ಸೆಳೆದರು. 14ನೇ ನಿಮಿಷದಲ್ಲಿ ಟೈಟನ್ಸ್‌ ಎದುರಾಳಿಯನ್ನು ಆಲೌಟ್‌ ಮಾಡಿತ್ತಲ್ಲದೇ ನಾಲ್ಕು ಪಾಯಿಂಟ್‌ಗಳ ಮುನ್ನಡೆಯನ್ನೂ ಪಡೆಯಿತು. ಆದರೆ ಈ ಹಿನ್ನಡೆಯ ಹೊರತಾಗಿಯೂ ಮುಂಬಾ ತಂಡ ಬಿಟ್ಟುಕೊಡುವಂತೆ ಕಾಣಲಿಲ್ಲ. ಅಭಿಷೇಕ್‌ ಸಿಂಗ್‌ ಮತ್ತು ಅರ್ಜುನ್‌ ದೇಶವಾಲ್‌ ತಂಡ ಚೇತರಿಸಿಕೊಳ್ಳಲು ನೆರವಾದರು. ವಿರಾಮದ ವೇಳೆ ಸ್ಕೋರ್‌ 15–15ರಲ್ಲಿ ಸಮನಾಗಿತ್ತು.

ಉತ್ತರಾರ್ಧದ ಎರಡನೇ ನಿಮಿಷ ಎದುರಾಳಿಗಳನ್ನು ಆಲೌಟ್‌ ಮಾಡುವಲ್ಲಿ ಮುಂಬಾ ತಂಡ ಯಶಸ್ವಿಯಾಯಿತು. ಟೈಟನ್ಸ್‌ನ ರಕ್ಷಣಾ ಆಟಗಾರ ವಿಶಾಲ್‌ ಭಾರದ್ವಾಜ್‌ ಕೆಲವು ಒಳ್ಳೆಯ ಹಿಡಿತಗಳನ್ನು ಪ್ರದರ್ಶಿಸಿದರು. ಆದರೆ ನಂತರ ಅತ್ರಾಚಲಿ ಉತ್ತಮ ಪ್ರದರ್ಶನದೊಡನೆ ಮುಂಬಾ ತಂಡ ಲೀಡ್‌ ಪಡೆಯಿತ್ತಲ್ಲದೇ ಬಳಿಕ ಅದನ್ನು ವಿಸ್ತರಿಸುತ್ತ ಹೋಯಿತು.

ಬುಧವಾರದ ಪಂದ್ಯಗಳು: ಹರಿಯಾಣ ಸ್ಟೀಲರ್ಸ್‌– ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 7.30). ಬೆಂಗಾಲ್‌ ವಾರಿಯರ್ಸ್‌– ಯು ಮುಂಬಾ ಆರಂಭ: ರಾತ್ರಿ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.