
ಪ್ರೊ ಕಬಡ್ಡಿ ಲೀಗ್
ಚೆನ್ನೈ: ಅರ್ಜುನ್ ದೇಶ್ವಾಲ್ (26 ಅಂಕ) ಅವರ ಅಮೋಘ ರೇಡಿಂಗ್ ಬಲದಿಂದ ಆತಿಥೇಯ ತಮಿಳು ತಲೈವಾಸ್ ತಂಡವು ಮಂಗಳವಾರ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ 19 ಅಂಕಗಳ ಸುಲಭ ಜಯ ಸಾಧಿಸಿತು.
ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಗರಿಷ್ಠ ಸ್ಕೋರಿಂಗ್ ಕಂಡ ಪಂದ್ಯದಲ್ಲಿ ತಲೈವಾಸ್ ತಂಡವು 56–37ರಿಂದ ಪಾರಮ್ಯ ಮೆರೆಯಿತು. ಅರ್ಜುನ್ ಅವರು 21 ಟಚ್ ಪಾಯಿಂಟ್ಸ್ ಮತ್ತು 5 ಬೋನಸ್ ಅಂಕ ಬಾಚಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ.
ತಲೈವಾಸ್ ತಂಡಕ್ಕೆ ಇದು 13 ಪಂದ್ಯಗಳಲ್ಲಿ ಆರನೇ ಗೆಲುವಾಗಿದೆ. ಒಟ್ಟು 12 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಟ್ನಾ ತಂಡಕ್ಕೆ 11 ಪಂದ್ಯಗಳಲ್ಲಿ ಇದು ಎಂಟನೇ ಸೋಲು. ಆರು ಅಂಕಗಳೊಂದಿಗೆ ಕೊನೆಯ ಮತ್ತು 12ನೇ ಸ್ಥಾನದಲ್ಲಿದೆ.
ಆರಂಭದಿಂದಲೇ ಚುರುಕಿನ ಆಟ ಪ್ರದರ್ಶಿಸಿದ ಆತಿಥೇಯ ತಂಡದ ಆಟಗಾರರು ಮೊದಲಾರ್ಧದಲ್ಲಿ 30–19 ಮುನ್ನಡೆ ಪಡೆದರು. ದ್ವಿತೀಯಾರ್ಧ ದಲ್ಲೂ ಹಿಡಿತ ಮುಂದುವರಿಸಿ, ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು. ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್ ಬಲೆಗೆ ಕೆಡವಿದರು.
ತಲೈವಾಸ್ ತಂಡದ ರೇಡರ್ ನರೇಂದರ್ ಖಂಡೋಲ (6), ಡಿಫೆಂಡರ್‌ಗಳಾದ ಆಶಿಶ್ ಮತ್ತು ನಿತೀಶ್ ಕುಮಾರ್ (ತಲಾ 5) ‘ಹೈ ಫೈ’ ಸಾಧನೆ ಮಾಡಿದರು. ಪಟ್ನಾ ಪರ ರೇಡರ್‌ಗಳಾದ ಅಯನ್ ಲೋಚಬ್ (16) ಮತ್ತು ಅಂಕಿತ್ ಕುಮಾರ್ ರಾಣಾ (14) ಉತ್ತಮ ಹೋರಾಟ ತೋರಿದರು. ತಂಡ ಗಳಿಸಿದ 37 ಅಂಕಗಳಲ್ಲಿ 30 ಅನ್ನು ಇವರಿಬ್ಬರೇ ಬುಟ್ಟಿಗೆ ಹಾಕಿಕೊಂಡರು. ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ದಬಂಗ್‌ಗೆ 11ನೇ ಗೆಲುವು: ಅಮೋಘ ಲಯದಲ್ಲಿರುವ ಡಬಂಗ್ ಡೆಲ್ಲಿ ತಂಡವು ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರಿಯಾಣ ಸ್ಟೀಲರ್ಸ್ ತಂಡವನ್ನು ಟೈಬ್ರೇಕರ್‌ನಲ್ಲಿ 9–3ರಿಂದ ಮಣಿಸಿತು. ಇದರೊಂದಿಗೆ ಈ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 11ನೇ ಜಯ ದಾಖಲಿಸಿತು. ನಿಗದಿತ ಅವಧಿಯ ಪಂದ್ಯವು 33–33ರಿಂದ ಸಮಬಲಗೊಂಡಿತ್ತು.
ಇಂದಿನ ಪಂದ್ಯಗಳು
ತೆಲುಗು ಟೈಟನ್ಸ್– ಹರಿಯಾಣ ಸ್ಟೀಲರ್ಸ್ (ರಾತ್ರಿ 8)
ಪುಣೇರಿ ಪಲ್ಟನ್– ಯು ಮುಂಬಾ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.