ADVERTISEMENT

ಪ್ರೊ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌ಗೆ ಬೆದರಿದ ಬುಲ್ಸ್

ಮಿಂಚಿದ ದೀಪಕ್‌ ನರ್ವಾಲ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 19:52 IST
Last Updated 4 ಅಕ್ಟೋಬರ್ 2019, 19:52 IST
ಬೆಂಗಳೂರು ಬುಲ್ಸ್‌ ತಂಡದ ಪವನ್‌ ಕುಮಾರ್‌ ರೇಡಿಂಗ್‌ ವೈಖರಿ
ಬೆಂಗಳೂರು ಬುಲ್ಸ್‌ ತಂಡದ ಪವನ್‌ ಕುಮಾರ್‌ ರೇಡಿಂಗ್‌ ವೈಖರಿ   

ಪಂಚುಕುಲಾ: ದೀಪಕ್ ನರ್ವಾಲ್‌ ಅವರ ಸ್ಫೂರ್ತಿಯುತ ರೇಡ್‌ಗಳಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಶುಕ್ರವಾರ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು 41–34 ಪಾಯಿಂಟ್‌ ಗಳಿಂದ ಸೋಲಿಸಿತು.

ತಾವು ದೇವಿಲಾಲ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನರ್ವಾಲ್‌ 16 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಅವರಿಗೆ ನೀಲೇಶ್‌ ಸಾಳುಂಕೆ (9 ಪಾಯಿಂಟ್‌) ಬೆಂಬಲ ನೀಡಿದರು.‍ಜೈಪುರ ತಂಡ ವಿರಾಮದ ವೇಳೆ 20–18ರಲ್ಲಿ ಮುಂದಿತ್ತು.

ಬೆಂಗಳೂರು ತಂಡದ ಸ್ಟಾರ್‌ ರೈಡರ್‌ ಪವನ್‌ ಶೆರಾವತ್‌ ಮತ್ತೊಂದು ‘ಸೂಪರ್‌ ಟೆನ್‌’ (14 ಪಾಯಿಂಟ್ಸ್‌) ಸಾಧಿಸಿದರೂ ಶುಕ್ರ ವಾರ ರಾತ್ರಿ ಬೆಂಗಳೂರಿನ ರಕ್ಷಣಾ ವಿಭಾಗ, ಜೈಪುರಕ್ಕೆ ಹೋಲಿಸಿದಾಗ ದುರ್ಬಲಗೊಂಡಂತೆ ಕಂಡಿತು.

ADVERTISEMENT

ಪವನ್‌ ಹಿಡಿತ ಸಾಧಿಸದಂತೆ ನೋಡಿಕೊಂಡ ಪ್ಯಾಂಥರ್ಸ್ ರಕ್ಷಣೆ ಆಟಗಾರರು ಆರಂಭದ ಐದು ನಿಮಿಷಗಳಲ್ಲಿ ಎರಡು ಬಾರಿ ಅವರನ್ನು ಹಿಡಿದುಹಾಕಿ ಮೂರು ಪಾಯಿಂಟ್‌ಗಳ ಲೀಡ್ ಸಾಧಿಸಿದರು.

ನಾಯಕ ಹಾಗೂ ಪ್ರಮುಖ ದಾಳಿಗಾರ ದೀಪಕ್‌ ನಿವಾಸ್ ಹೂಡಾ ಗೈರಿನಲ್ಲಿ ನೀಲೇಶ್‌ ಸಾಳುಂಕೆ ಮತ್ತು ದೀಪಕ್‌ ಅವರೇ ದಾಳಿಯ ಹೊಣೆ ವಹಿಸಬೇಕಾಯಿತು. ಬುಲ್ಸ್ ನಾಯಕ ರೋಹಿತ್‌ ಗಾಯಾಳಾದ ಕಾರಣ ಸುಮಿತ್‌ ಸಿಂಗ್‌ (7 ಪಾಯಿಂಟ್‌) ಎರಡನೇ ರೇಡರ್‌ ಪಾತ್ರ ನಿರ್ವಹಿಸಿದರು.

ಸಾಳುಂಕೆ ಎಂಟನೇ ನಿಮಿಷ ಸೂಪರ್‌ ರೈಡ್‌ನಲ್ಲಿ ಮೂರು ಪಾಯಿಂಟ್‌ಗಳನ್ನು ತಂದುಕೊಟ್ಟು ತಂಡಕ್ಕೆ ಮೇಲುಗೈ ಒದಗಿಸಿದರು. ಬುಲ್ಸ್ ಕೂಡ ಪವನ್‌ ಮೂಲಕ ತಿರುಗೇಟು ನೀಡಿತು. ಮೊದಲಾರ್ಧದಲ್ಲಿ ಯಾರೂ ಆಲೌಟ್‌ ಆಗಿರಲಿಲ್ಲ.

ಉತ್ತರಾರ್ಧದ ಆರನೇ ನಿಮಿಷ ಜೈಪುರ ತಂಡ ಆಲೌಟ್‌ ಆಯಿತು. ಆದರೆ ಎದೆಗುಂದದೇ ಆಡಿದ ಆ ತಂಡ ಎದುರಾಳಿ ತಂಡದ ಪ್ರಮುಖ ರೈಡರ್‌ ಪವನ್‌ ಅವರನ್ನು ಸಂದೀಪ್‌ ಧುಲ್‌ ಮೂಲಕ ನಿಯಂತ್ರಿಸುವಲ್ಲಿ ಯಶಸ್ಸು ಪಡೆಯಿತು. ಕೊನೆಯ ಕೆಲವು ನಿಮಿಷಗಳಿದ್ದಾಗ ಬುಲ್ಸ್ ಆಲೌಟ್‌ ಆಯಿತು.

ಹರಿಯಾಣಕ್ಕೆ ಜಯ: ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲ‌ರ್ಸ್‌ 52–32 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್‌ ತಂಡವನ್ನು ಸುಲಭವಾಗಿ ಸೋಲಿಸಿತು. ಹರಿಯಾಣದ ವಿಕಾಸ್‌ ಖಂಡೋಲಾ 14 ಪಾಯಿಂಟ್ಸ್ ಗಳಿಸಿದರು. ಟೈಟನ್ಸ್ ಪರ ಸಿದ್ಧಾರ್ಥ ದೇಸಾಯಿ ಮಿಂಚಿ 12 ಪಾಯಿಂಟ್‌ ಮತ್ತು ಫರಾದ್‌ ಮಿಲೆಗಾರ್ದನ್‌ 10 ಪಾಯಿಂಟ್ಸ್ ಗಳಿಸಿದರು. ಸ್ಟೀಲರ್ಸ್‌ ಲೀಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.