ADVERTISEMENT

Pro Kabaddi League: ಟೈಟನ್ಸ್‌ಗೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:20 IST
Last Updated 24 ಸೆಪ್ಟೆಂಬರ್ 2025, 4:20 IST
   

ಜೈಪುರ: ಭರತ್‌ ಮತ್ತು ವಿಜಯ್‌ ಮಲಿಕ್‌ ಅವರ ಅಮೋಘ ರೇಡಿಂಗ್‌ ಬಲದಿಂದ ತೆಲುಗು ಟೈಟನ್ಸ್‌ ತಂಡವು ಮಂಗಳವಾರ ಪ್ರೊ ಕಬಡ್ಡಿ ಲೀಗ್‌ನ ರೋಚಕ ಹಣಾಹಣಿಯಲ್ಲಿ 1 ಅಂಕದಿಂದ ಗುಜರಾತ್ ಜೈಂಟ್ಸ್‌ ತಂಡವನ್ನು ಮಣಿಸಿತು.

ಸವಾಯಿ ಮಾನಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೈಟನ್ಸ್‌ ತಂಡವು 30–29ರಿಂದ ಜಯ ಸಾಧಿಸಿತು. ಆಡಿರುವ ಹತ್ತು ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿ 10 ಅಂಕ ಗಳಿಸಿದ ಟೈಟನ್ಸ್ ತಂಡವು ಲೀಗ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಜೈಂಟ್ಸ್‌ ತಂಡಕ್ಕೆ ಎಂಟು ಪಂದ್ಯಗಳಲ್ಲಿ ಇದು ಏಳನೇ ಸೋಲಾಗಿದೆ.

ಪಂದ್ಯದ ಮೊದಲಾರ್ಧದಲ್ಲಿ ಎರಡು ಅಂಕಗಳ (12–10) ಮುನ್ನಡೆ ಪಡೆದ ಟೈಟನ್ಸ್‌ ತಂಡಕ್ಕೆ ದ್ವಿತೀಯಾರ್ಧದಲ್ಲಿ ಜೈಂಟ್ಸ್‌ ಆಟಗಾರರಿಂದ ಪ್ರಬಲ ಸ್ಪರ್ಧೆ ಎದುರಾಯಿತು. ಒಂದು ಹಂತದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ, 18–14 ಮುನ್ನಡೆ ಪಡೆದ ಜೈಂಟ್ಸ್‌ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ಕೊನೆಯ ಕ್ಷಣದವರೆಗೆ ಹಾವು ಏಣಿಯಂತೆ ಸಾಗಿದ ಪಂದ್ಯದಲ್ಲಿ ಟೈಟನ್ಸ್‌ ಮೇಲುಗೈ ಸಾಧಿಸಿತು.

ADVERTISEMENT

ಟೈಟನ್ಸ್‌ ಪರ ಭರತ್‌ 9 ಅಂಕ ಕಲೆ ಹಾಕಿದರೆ, ವಿಜಯ್‌ 7 ಅಂಕ ಸಂಪಾದಿಸಿದರು. ಜೈಂಟ್ಸ್ ಪರ ಮಹಮ್ಮದ್‌ರೇಜಾ ಶಾಡ್ಲುಯಿ 6 ಅಂಕ ಗಳಿಸಿದರು.

ಪ್ಯಾಂಥರ್ಸ್‌ಗೆ ಗೆಲುವು: ದಿನದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಟೈಬ್ರೇಕರ್‌ನಲ್ಲಿ 6–4ರಿಂದ ಯು ಮುಂಬಾ ತಂಡವನ್ನು ಮಣಿಸಿತು. ನಿಗದಿತ ಅವಧಿಯ ಪಂದ್ಯ 38–38ರಿಂದ ಟೈ ಆಗಿತ್ತು.

ಇದು ಈ ಆವೃತ್ತಿಯಲ್ಲಿ ಆರನೇ ಟೈಬ್ರೇಕರ್‌ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.