ADVERTISEMENT

ಪ್ರೊ ಕಬಡ್ಡಿ: ಮುಂಬಾಗೆ ರೋಚಕ ಜಯ

ಪ್ರೊ ಕಬಡ್ಡಿ ಲೀಗ್‌ ಟೂರ್ನಿ: ಆಶಿಶ್‌ ಭರ್ಜರಿ ರೇಡಿಂಗ್‌, ಪ್ರಣಯ್ ಮಿಂಚು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 18:47 IST
Last Updated 2 ನವೆಂಬರ್ 2022, 18:47 IST
ಯು ಮುಂಬಾ ಮತ್ತು ತೆಲುಗು ಟೈಟನ್ಸ್ ಆಟಗಾರರ ಪೈ‍ಪೋಟಿ
ಯು ಮುಂಬಾ ಮತ್ತು ತೆಲುಗು ಟೈಟನ್ಸ್ ಆಟಗಾರರ ಪೈ‍ಪೋಟಿ   

ಪುಣೆ: ಆಶಿಶ್ ಅವರ ಭರ್ಜರಿ ರೇಡಿಂಗ್ ಬಲದಿಂದ ಯು ಮುಂಬಾ ತಂಡವು ಪ್ರೊ ಕಬಡ್ಡಿ ಲೀಗ್‌ ಕಬಡ್ಡಿ ಟೂರ್ನಿಯಲ್ಲಿ ರೋಚಕ ಜಯ ಗಳಿಸಿತು.

ಇಲ್ಲಿನ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 40–37 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು.

ವಿಜೇತ ತಂಡಕ್ಕಾಗಿ ಆಶಿಶ್ 12 ಪಾಯಿಂಟ್ಸ್ ಕಲೆಹಾಕಿದರೆ, ಬದಲಿ ಆಟಗಾರನಾಗಿ ಬಂದ ಪ್ರಣಯ್ ರಾಣೆ ಆರು ಪಾಯಿಂಟ್ಸ್ ಗಳಿಸಿದರು. ನಾಯಕ ಸುರೇಂದರ್ ಸಿಂಗ್‌ (4), ಹೈದರಾಲಿ (4) ಮತ್ತು ಮೋಹಿತ್ (4) ಕೂಡ ಕಾಣಿಕೆ ನೀಡಿದರು.

ADVERTISEMENT

ತೆಲುಗು ಟೈಟನ್ಸ್ ಪರ ಸಿದ್ಧಾರ್ಥ್‌ ದೇಸಾಯಿ ಅವರು ಗಳಿಸಿದ 18 ಪಾಯಿಂಟ್ಸ್ ವ್ಯರ್ಥವಾದವು.

ಪಂದ್ಯದ ಆರಂಭದಿಂದಲೇ ಉಭಯ ತಂಡಗಳ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಮೊದಲಾರ್ಧ ಮುಗಿದಾಗ ಯು ಮುಂಬಾ 18 ಪಾಯಿಂಟ್ಸ್ ಮತ್ತು ಟೈಟನ್ಸ್ 14 ಪಾಯಿಂಟ್ಸ್ ಗಳಿಸಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಟೈಟನ್ಸ್ ಮರುಹೋರಾಟ ನಡೆಸಿತು. ಈ ಅವಧಿಯಲ್ಲಿ ತಂಡ 23 ಪಾಯಿಂಟ್ಸ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಮುಂಬಾ 22 ಪಾಯಿಂಟ್ಸ್ ಗಳಿಸಿತು.

ಬೆಂಗಾಲ್ ವಾರಿಯರ್ಸ್ ಮತ್ತು ತಮಿಳ್ ತಲೈವಾಸ್‌ ನಡುವಣ ದಿನದ ಇನ್ನೊಂದು ಪಂದ್ಯವು 41–41ರಿಂದ ಟೈ ಆಯಿತು.ಟೂರ್ನಿಗೆ ಗುರುವಾರ ವಿರಾಮದ ದಿನವಾಗಿದೆ.

ಶುಕ್ರವಾರದ ಪಂದ್ಯಗಳು

ಪಟ್ನಾ ಪೈರೇಟ್ಸ್– ಯು ಮುಂಬಾ (ಆರಂಭ: ರಾತ್ರಿ 7.30)

ದಬಾಂಗ್ ಡೆಲ್ಲಿ– ಜೈಪುರ ಪಿಂಕ್ ಪ್ಯಾಂಥರ್ಸ್ (ಆರಂಭ: ರಾತ್ರಿ 8.30)

ಯುಪಿ ಯೋಧಾ– ಪುಣೇರಿ ಪಲ್ಟನ್‌ (ಆರಂಭ: ರಾತ್ರಿ 9.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.