ADVERTISEMENT

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ವಾರಿಯರ್ಸ್‌

ತೆಲುಗು ಟೈಟನ್ಸ್‌ ವಿರುದ್ಧ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 16:48 IST
Last Updated 25 ಸೆಪ್ಟೆಂಬರ್ 2019, 16:48 IST
ತೆಲುಗು ಟೈಟನ್ಸ್‌ ತಂಡದ ರಕ್ಷಣೆ ಆಟಗಾರರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವಾರಿಯರ್ಸ್‌ ರೈಡರ್‌ ಮಣಿಂದರ್‌ ಸಿಂಗ್‌
ತೆಲುಗು ಟೈಟನ್ಸ್‌ ತಂಡದ ರಕ್ಷಣೆ ಆಟಗಾರರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವಾರಿಯರ್ಸ್‌ ರೈಡರ್‌ ಮಣಿಂದರ್‌ ಸಿಂಗ್‌   

ಜೈಪುರ: ನಾಯಕ ಮಣಿಂದರ್‌ ಸಿಂಗ್‌ ಅವರ ಉತ್ತಮ ರೇಡಿಂಗ್ ನೆರವಿನಿಂದ ಬೆಂಗಾಲ್‌ ವಾರಿಯರ್ಸ್‌ ತಂಡ, ಹೋರಾಟದಿಂದ ಕೂಡಿದ್ದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡವನ್ನು 40–39 ರಿಂದ ಸೋಲಿಸಿತು. ವಿರಾಮದ ನಂತರ ಟೈಟನ್ಸ್‌ ಹೋರಾಟ ತೋರಿದರೂ ಒಂದು ಪಾಯಿಂಟ್‌ ಅಂತರ ಉಳಿಯಿತು.

ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ವಾರಿಯರ್ಸ್‌ ತಂಡ ಈಗ 19 ಪಂದ್ಯಗಳಿಂದ 73 ಪಾಯಿಂಟ್ಸ್‌ ಸಂಗ್ರಹಿಸಿ ಲೀಗ್‌ನಲ್ಲಿ ಅಗ್ರಸ್ಥಾನಕ್ಕೇರಿತು. ದಬಂಗ್‌ ಡೆಲ್ಲಿ 17 ಪಂದ್ಯಗಳಿಂದ 72 ಪಾಯಿಂಟ್ಸ್‌ ಸಂಗ್ರಹಿಸಿ ತಿಂಗಳಿಂದ ಅಗ್ರಸ್ಥಾನದಲ್ಲಿತ್ತು.

ಉತ್ತಮ ಲಯದಲ್ಲಿದ್ದಾಗ ಮಣಿಂದರ್ ಅವರನ್ನು ಹಿಡಿಯುವುದು ಕಷ್ಟ. ಅವರು ಎರಡನೇ ನಿಮಿಷವೇ ಎದುರಾಳಿ ತಂಡದ ಅರುಣ್‌ ಮತ್ತು ಫರಾದ್‌ ಅವರನ್ನು ಔಟ್‌ ಮಾಡುವ ಮೂಲಕ ಹಾಲಿ ಆವೃತ್ತಿಯಲ್ಲಿ 150 ‘ಟಚ್‌ ಪಾಯಿಂಟ್‌’ ಪೂರೈಸಿದ ಸಾಧನೆಗೆ ಪಾತ್ರರಾದರು. ರೇಡಿಂಗ್‌ನಲ್ಲಿ ಸುಕೇಶ್‌ ಹೆಗ್ಡೆ (5), ಟ್ಯಾಕ್ಲಿಂಗ್‌ನಲ್ಲಿ ಬಲದೇವ ಸಿಂಗ್‌ ಮತ್ತುರಿಂಕು ನರ್ವಾಲ್‌ ನೆರವಾದರು.

ADVERTISEMENT

ಟೈಟನ್ಸ್‌ ಪರ ಪ್ರಮುಖ ರೇಡರ್‌ ಸಿದ್ಧಾರ್ಥ ದೇಸಾಯಿ 15 ಪಾಯಿಂಟ್ಸ್‌ ಗಳಿಸಿದರೂ ಎಂದಿನ ಲಯದಲ್ಲಿದ್ದಂತೆ ಕಾಣಲಿಲ್ಲ. ರಜನೀಶ್‌ ದಲಾಲ್‌ 6 ರೇಡ್‌ ಪಾಯಿಂಟ್‌ ಮತ್ತು ಟ್ಯಾಕ್ಲಿಂಗ್‌ನಲ್ಲಿ ಅಬೊಜರ್‌ ಮೊಹಜರ್ಮಿಗಾನಿ ಐದು ಪಾಯಿಂಟ್ಸ್ ಗಳಿಸಿದರು. ಟೈಟನ್ಸ್‌ 17 ಪಂದ್ಯಗಳಿಂದ 31 ಅಂಕ ಸಂಗ್ರಹಿಸಿದೆ.

ಪಿಂಕ್‌ ಪ್ಯಾಂಥರ್ಸ್‌ಗೆ ಜಯ: ಆತಿಥೇಯ ಜೈಪುರ್ ಪಿಂಕ್‌ ಪ್ಯಾಂಥರ್ಸ್ ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು 43-34 ಪಾಯಿಂಟ್‌ಗಳಿಂದ ಸೋಲಿಸಿತು.

ಜೈಪುರ್‌ ಪರ ದೀಪಕ್‌ ನಿವಾಸ್‌ ಹೂಡ 12, ದೀಪಕ್‌ ನರ್ವಾಲ್‌ 10, ನಿಲೇಶ್ ಸಾಳುಂಕೆ ಎಂಟು ಪಾಯಿಂಟ್ಸ್ ಗಳಿಸಿದರು. ಪಲ್ಟನ್‌ ಪರ ರೇಡಿಂಗ್‌ನಲ್ಲಿ ಮಿಂಚಿದ ಪಂಕಜ್‌ ಮೋಹಿತೆ 15 ಪಾಯಿಂಟ್ಸ್‌ ಗಳಿಸಿದರೆ, ಮಂಜೀತ್‌ ಎಂಟು ಪಾಯಿಂಟ್ಸ್‌ ಗಳಿಸಿದರು.

ಗುರುವಾರದ ಪಂದ್ಯ: ಪ‍ಟ್ನಾ ಪೈರೇಟ್ಸ್‌– ದಬಂಗ್‌ ಡೆಲ್ಲಿ (ರಾತ್ರಿ 7.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.