ADVERTISEMENT

ದೆಹಲಿ, ಪಂಜಾಬ್‌ ಬಾಕ್ಸರ್‌ಗಳ ಪಾರಮ್ಯ

ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌; ಮುದ ನೀಡಿದ ಬಬಿತಾ–ಸುಮನ್ ಬೌಟ್‌

ಪಿಟಿಐ
Published 1 ಜನವರಿ 2019, 18:33 IST
Last Updated 1 ಜನವರಿ 2019, 18:33 IST
   

ವಿಜಯನಗರ, ಬಳ್ಳಾರಿ ಜಿಲ್ಲೆ : ಚಂಡೀಗಢ, ದೆಹಲಿ ಮತ್ತು ಪಂಜಾಬ್‌ ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಮಂಗಳವಾರ ಪಾರಮ್ಯ ಮೆರೆದರು.

54 ಕೆಜಿ ವಿಭಾಗದಲ್ಲಿ ರಿಯಾ ತೋಕಾಸ್ ಅವರ ಅಮೋಘ ಸಾಧನೆಯ ಮೂಲಕ ದಿನದ ಮೊದಲ ಪಂದ್ಯದಲ್ಲಿ ದೆಹಲಿ ಉತ್ತಮ ಆರಂಭ ಕಂಡಿತು. ತಮಿಳುನಾಡಿನ ವಿ.ವಿನೋದಿನಿ ಎದುರು ಬಲವಾದ ಪಂಚ್‌ಗಳ ಮೂಲಕ ರಿಯಾ ಮಿಂಚಿದರು. ಈ ಮೂಲಕ 5–0 ಅಂತರದಿಂದ ಗೆಲುವು ಸಾಧಿಸಿದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮನೀಷಾ ಮೌನ್ ಅವರನ್ನು ಮುಂದಿನ ಬೌಟ್‌ನಲ್ಲಿ ರಿಯಾ ಎದುರಿಸುವರು.

69 ಕೆಜಿ ವಿಭಾಗದ ಬೌಟ್‌ನಲ್ಲಿ ಚಂಡಿಗಢದ ಸೋಹಿನಿ, ತೆಲಂಗಾಣದ ಸಾಯಿ ಶ್ರೀ ರೆಡ್ಡಿ ಅವರನ್ನು ಮಣಿಸಿದರು. ಆರಂಭದಲ್ಲಿ ರಿಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಸೋಹಿನಿ ನಂತರ ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಬಬಿತಾ–ಸುಮನ್ ಪ್ರಬಲ ಪೈಪೋಟಿ: ಉತ್ತರಾಖಂಡದ ಬಬಿತಾ ಬಿಶ್ಟ್‌ ಮತ್ತು ರಾಜಸ್ಥಾನದ ಸುಮನ್‌ ಖೋಡಾ ನಡುವಿನ 69 ಕೆಜಿ ಬೌಟ್‌ ರೋಮಾಂಚಕವಾಗಿತ್ತು. ಪ್ರಬಲ ಪಂಚ್‌ಗಳ ಮೂಲಕ ಮಿಂಚಿದ ಉಭಯ ಬಾಕ್ಸರ್‌ಗಳು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು. ಮೂರನೇ ಸುತ್ತಿನ ವರೆಗೆ ಸಾಗಿದ ಸ್ಪರ್ಧೆಯ ಕೊನೆಯಲ್ಲಿ ಬಬಿತಾ ಗೆಲುವು ತಮ್ಮದಾಗಿಸಿಕೊಂಡರು.

ವೆಲ್ಟರ್‌ವೇಟ್ ವಿಭಾಗದಲ್ಲಿ ಪಂಜಾಬ್‌ನ ಗಗನ್‌ದೀಪ್ ಕೌರ್‌ ಮಹಾರಾಷ್ಟ್ರದ ಸಿಮ್ರನ್‌ ಮೆಂಡನ್‌ ಎದುರು 5–0ಯಿಂದ ಗೆದ್ದರು.

ಕರ್ನಾಟಕದ ಭವ್ಯಗೆ ಜಯ

60 ಕೆಜಿ ವಿಭಾಗದಲ್ಲಿ ಕರ್ನಾಟಕದ ಭವ್ಯ ಅವರು ಉತ್ತಮ ಸಾಮರ್ಥ್ಯ ಮೆರೆದು ಸಿಕ್ಕಿಂನ ಸೋಮ್‌ ಮಯ ಸುಬ್ಬ ಎದುರು 4–1ರಿಂದ ಗೆದ್ದರು.ಬ್ಯಾಂಟಮ್‌ವೇಟ್ ವಿಭಾಗದಲ್ಲಿ ಪಂಜಾಬ್‌ನ ರಿಯಾ, ಬಂಗಾಳದ ಪೌಲಮಿ ಸರ್ಕಾರ್‌ ಎದುರು ಗೆದ್ದರು. ಹಿಮಾಚಲಪ್ರದೇಶದ ಸಂಧ್ಯಾ 64 ಕೆಜಿ ವಿಭಾಗದಲ್ಲಿ ಸೋನಲ್ ರಸಲ್ ಎದುರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.