ADVERTISEMENT

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪಿ.ವಿ.ಸಿಂಧು

ಬಿಂಗ್ ಸವಾಲು ಮೀರಿದ ಭಾರತದ ಆಟಗಾರ್ತಿ

ಪಿಟಿಐ
Published 29 ಏಪ್ರಿಲ್ 2022, 13:10 IST
Last Updated 29 ಏಪ್ರಿಲ್ 2022, 13:10 IST
ಪಂದ್ಯ ಜಯಿಸಿದ ಸಂಭ್ರಮದಲ್ಲಿ ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಂದ್ಯ ಜಯಿಸಿದ ಸಂಭ್ರಮದಲ್ಲಿ ಪಿ.ವಿ.ಸಿಂಧು– ಪಿಟಿಐ ಚಿತ್ರ   

ಮನಿಲಾ, ಪಿಲಿಪ್ಪೀನ್ಸ್: ರೋಚಕ ಹಣಾಹಣಿಯಲ್ಲಿ ಎದುರಾಳಿಯನ್ನು ಮಣಿಸಿದ ಭಾರತದ ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಮಹಿಳಾ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸಿಂಧು ಅವರಿಗೆ21-9, 13-21, 21-19ರಿಂದ ಚೀನಾದ್ ಹೆ ಬಿಂಗ್ ಜಿಯಾವೊ ಎದುರು ಜಯ ಒಲಿಯಿತು.

2014ರ ಗಿಮ್ಚಿಯೊನ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತದ ಆಟಗಾರ್ತಿ, ಒಂದು ತಾಸು 16 ನಿಮಿಷಗಳಲ್ಲಿ ಪಂದ್ಯ ಜಯಿಸಿ ಇಲ್ಲಿಯೂ ಪದಕ ಖಚಿತಪಡಿಸಿದ್ದಾರೆ.

ADVERTISEMENT

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, 26 ವರ್ಷದ ಸಿಂಧು, ನಾಲ್ಕರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ, ಜಪಾನ್ ಆಟಗಾರ್ತಿ ಅಕಾನೆ ಯಾಮಗುಚಿ ಅವರನ್ನು ಎದುರಿಸುವರು.

ಕ್ವಾರ್ಟರ್‌ಫೈನಲ್‌ ಮೊದಲ ಗೇಮ್‌ನ ಆರಂಭದಲ್ಲಿ 11–2ರಿಂದ ಮುನ್ನಡೆ ಸಾಧಿಸಿದ ಬಳಿಕ ಸಿಂಧು ತಿರುಗಿ ನೋಡಲಿಲ್ಲ. ಅದೇ ಲಯದಲ್ಲಿ ಮುಂದುವರಿದು ಗೇಮ್ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಎಸಗಿದ ಲೋಪಗಳ ಲಾಭ ಪಡೆದ ಬಿಂಗ್‌ ತಿರುಗೇಟು ನೀಡಿದರು. ಚುರುಕಿನ ರಿಟರ್ನ್‌ಗಳ ಮೂಲಕ ಮಿಂಚಿದ ಅವರು ವಿರಾಮದ ಹೊತ್ತಿಗೆ 19–12ರಿಂದ ಮುಂದಿದ್ದರು. ಅಂತಿಮವಾಗಿ ಗೇಮ್ ಗೆದ್ದು ಬೀಗಿದರು.

ನಿರ್ಣಾಯಕ ಮತ್ತು ಮೂರನೇ ಗೇಮ್ ಇನ್ನಷ್ಟು ರಂಗೇರಿತು. ಉಭಯ ಆಟಗಾರ್ತಿಯರ ನಡುವೆ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂದಿತು. ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್ ಕಲೆಹಾಕಿದ ಸಿಂಧು, ವಿರಾಮದ ವೇಳೆಗೆ 11–5ರಿಂದ ಮೇಲುಗೈ ಸಾಧಿಸಿದ್ದರು. ಆದರೆ ಚೇತರಿಸಿಕೊಂಡ ಬಿಂಗ್‌ ಹಿನ್ನಡೆಯನ್ನು 15–16ಕ್ಕೆ ತಗ್ಗಿಸಿದರು. ಬಳಿಕ 18–16ಕ್ಕೆ ಮುನ್ನಡೆದ ಸಿಂಧು, ಸತತ ನಾಲ್ಕು ಪಾಯಿಂಟ್ಸ್ ಬಲದಿಂದ ಗೇಮ್‌ ಹಾಗೂ ಪಂದ್ಯ ಗೆದ್ದ ಸಂಭ್ರಮದಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.