ADVERTISEMENT

ಬ್ಯಾಡ್ಮಿಂಟನ್‌: ರಾಹುಲ್‌ಗೆ ಕಿರೀಟ

ಪಿಟಿಐ
Published 3 ಮಾರ್ಚ್ 2019, 18:45 IST
Last Updated 3 ಮಾರ್ಚ್ 2019, 18:45 IST

ನವದೆಹಲಿ: ಅಮೋಘ ಆಟ ಆಡಿದ ಭಾರತದ ರಾಹುಲ್‌ ಭಾರದ್ವಾಜ್‌, ನೈರೋಬಿಯಲ್ಲಿ ನಡೆದ ಕೀನ್ಯಾ ಓಪನ್‌ ಫ್ಯೂಚರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ರಾಹುಲ್‌ 21–23, 21–18, 21–18ರಲ್ಲಿ ಭಾರತದವರೇ ಆದ ಅಮನ್‌ ಫರೋಗ್‌ ಸಂಜಯ್‌ ಅವರನ್ನು ಪರಾಭವಗೊಳಿಸಿದರು.

ಹೋದ ವಾರ ನಡೆದಿದ್ದ ಉಗಾಂಡ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ರಾಹುಲ್‌, ಕೀನ್ಯಾ ಓಪನ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಮುಖ್ಯ ಘಟ್ಟಕ್ಕೆ ಪ್ರವೇಶಿಸಿದ್ದರು.

ADVERTISEMENT

ಫೈನಲ್‌ ಹೋರಾಟದ ಮೊದಲ ಗೇಮ್‌ನಲ್ಲಿ ರಾಹುಲ್‌ ಮತ್ತು ಅಮನ್‌ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 21–21 ಸಮಬಲ ಕಂಡುಬಂತು. ಈ ಹಂತದಲ್ಲಿ ಒತ್ತಡ ಮೀರಿ ನಿಂತು ಆಡಿದ ಅಮನ್‌ ಸತತ ಎರಡು ಪಾಯಿಂಟ್ಸ್‌ ಗಳಿಸಿ ಸಂಭ್ರಮಿಸಿದರು.

ಎರಡನೇ ಗೇಮ್‌ನಲ್ಲೂ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಆಟದ ರೋಚಕತೆಯೂ ಹೆಚ್ಚಿತ್ತು. ಕೊನೆಯಲ್ಲಿ ಪರಿಣಾಮಕಾರಿ ಆಟ ಆಡಿದ ರಾಹುಲ್‌ ಚುರುಕಾಗಿ ಪಾಯಿಂಟ್ಸ್‌ಗಳನ್ನು ಬುಟ್ಟಿಗೆ ಹಾಕಿಕೊಂಡು ಗೆಲುವಿನ ತೋರಣ ಕಟ್ಟಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನ ಮೊದಲಾರ್ಧದಲ್ಲೂ ಉಭಯ ಆಟಗಾರರು ಸಮಬಲದಿಂದ ಹೋರಾಡಿದರು. ದ್ವಿತೀಯಾರ್ಧದ ಶುರುವಿನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ನಂತರ ರಾಹುಲ್‌ ಮಿಂಚಿನ ಸಾಮರ್ಥ್ಯ ತೋರಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.