ADVERTISEMENT

ಚೆಸ್‌ ಒಲಿಂಪಿಯಾಡ್‌: ಗಮನ ಸೆಳೆದ ಎಂಟು ವರ್ಷದ ಬಾಲೆ ರಾಂದಾ ಸೆದೆರ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 21:38 IST
Last Updated 29 ಜುಲೈ 2022, 21:38 IST
ರಾಂದಾ ಸೆದೆರ್
ರಾಂದಾ ಸೆದೆರ್   

ಬೆಂಗಳೂರು: ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಿರುವ ಎಂಟು ವರ್ಷದ ಬಾಲೆ ರಾಂದಾ ಸೆದೆರ್ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ಈ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿರುವ ಅತಿ ಕಿರಿಯ ವಯಸ್ಸಿನ ಸ್ಪರ್ಧಿ ರಾಂದಾ. ಸದಾ ಸಂಘರ್ಷಗಳನ್ನು ಎದುರಿಸುತ್ತಿರುವ ಪ್ಯಾಲೆಸ್ಟೈನ್‌ ದೇಶದ ಹೆಬ್ರಾನ್‌ನಿಂದ ಬಂದಿರುವ ಆಟಗಾರ್ತಿ.

ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಈ ಹುಡುಗಿಯ ಕುರಿತು ಮಾಡಿರುವ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಾಕರ್ಷಣೆ ಗಳಿಸುತ್ತಿದೆ.

ADVERTISEMENT

ರಾಂದಾ ಐದು ವರ್ಷದವಳಿದ್ದಾಗ ತಂದೆ ಚೆಸ್‌ ಕಲಿಸಲು ಆರಂಭಿಸಿದ್ದರು. ಅಲ್ಪಾವಧಿಯಲ್ಲಿಯೇ ಒಲಿಂಪಿಯಾಡ್‌ನಲ್ಲಿ ಆಡುವ ಮಟ್ಟಕ್ಕೆ ಈ ಬಾಲೆ ಬೆಳೆದಿದ್ದಾಳೆ ಎಂದೂ ಫಿಡೆ ಟ್ವಿಟರ್‌ನಲ್ಲಿ ಬರೆದಿದೆ. ಇದಕ್ಕೂ ಮುನ್ನ ರಾಂದಾ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿದ್ದಾಳೆ. ಪ್ಯಾಲೆಸ್ಟೈನ್ ಮಹಿಳೆಯರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದಳು.ರಾಂದಾಗೆ ಗ್ರ್ಯಾಂಡ್‌ಮಾಸ್ಟರ್ ಆಗುವ ಗುರಿ ಇದೆ. ಅಲ್ಲದೇ ತನ್ನ ನೆಚ್ಚಿನ ಆಟಗಾರ್ತಿಯಾಗಿರುವ ಜುಡಿತ್ ಪೊಲ್ಗಾರ್ ಅವರನ್ನು ಭೇಟಿಯಾಗುವ ಇಚ್ಛೆಯನ್ನೂ ರಾಂದಾ ವ್ಯಕ್ತಪಡಿಸಿದ್ದಾಳೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜುಡಿತ್, ‘ರಾಂದಾ ಸಾಧನೆಯನ್ನು ನಿರಂತರವಾಗಿ ನೋಡುತ್ತಿರುತ್ತೇನೆ. ಈ ಒಲಿಂಪಿಯಾಡ್‌ನಲ್ಲಿ ಆಕೆ ಯಾವುದೇ ಪಂದ್ಯದಲ್ಲಿ ಜಯಿಸಿದರೂ ಸ್ಟುಡಿಯೊಗೆ ಕರೆದು ಸಂದರ್ಶನ ಮಾಡುವೆ’ ಎಂದಿದ್ದಾರೆ. ಈ ಒಲಿಂಪಿಯಾಡ್‌ನಲ್ಲಿ ಜುಡಿತ್ ಟಿವಿ ವೀಕ್ಷಕ ವಿವರಣೆಗಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.