ADVERTISEMENT

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಚಿಗುರೊಡೆದ ರ‍್ಯಾಪ್ಟರ್ಸ್‌ ಸೆಮಿಫೈನಲ್‌ ಕನಸು

ಮುಂಬೈ ರಾಕೆಟ್ಸ್‌ ತಂಡಕ್ಕೆ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲು

ವಿಕ್ರಂ ಕಾಂತಿಕೆರೆ
Published 8 ಜನವರಿ 2019, 19:13 IST
Last Updated 8 ಜನವರಿ 2019, 19:13 IST
ಬೆಂಗಳೂರು ರ‍್ಯಾಪ್ಟರ್ಸ್‌ನ ವು ಥಿ ತ್ರಾಂಗ್ ಷಟಲ್ ಅನ್ನು ಹಿಂದಿರುಗಿಸಿದ ರೀತಿ. ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ
ಬೆಂಗಳೂರು ರ‍್ಯಾಪ್ಟರ್ಸ್‌ನ ವು ಥಿ ತ್ರಾಂಗ್ ಷಟಲ್ ಅನ್ನು ಹಿಂದಿರುಗಿಸಿದ ರೀತಿ. ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ   

ಬೆಂಗಳೂರು: ಟ್ರಂಪ್‌ ಪಂದ್ಯದಲ್ಲಿವು ಥಿ ತ್ರಾಂಗ್ ಹಾಕಿಕೊಟ್ಟ ತಳಪಾಯದ ಮೇಲೆ ಗೆಲುವಿನ ಸೌಧ ಕಟ್ಟಿದ ನಾಯಕ ಕಿದಂಬಿ ಶ್ರೀಕಾಂತ್‌ ಮತ್ತು ಸಾಯಿ ಪ್ರಣೀತ್‌, ಆತಿಥೇಯ ಬೆಂಗಳೂರು ರ‍್ಯಾಪ‍್ಟರ್ಸ್ ತಂಡದ ಸೆಮಿಫೈನಲ್‌ ಹಾದಿ ಸುಗಮಗೊಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ತವರಿನ ಲೆಗ್‌ನಲ್ಲಿ ರ‍್ಯಾ‍‍ಪ್ಟರ್ಸ್‌ ಶುಭಾರಂಭ ಮಾಡಿತು. ಮುಂಬೈ ರಾಕೆಟ್ಸ್ ಎದುರಿನ ಹಣಾಹಣಿಯ ಮೊದಲ ನಾಲ್ಕು ಪಂದ್ಯಗಳನ್ನು ಆತಿಥೇಯರು ಗೆದ್ದರು. ಕೊನೆಯ ಪಂದ್ಯದಲ್ಲಿ ಗೆದ್ದರೂ ಟ್ರ‍ಂಪ್ ಪಂದ್ಯ ಸೋತ ಕಾರಣ ರಾಕೆಟ್ಸ್‌ 0–5ರಿಂದ ನಿರಾಸೆ ಅನುಭವಿಸಿತು.

ಮೊದಲ ಪಂದ್ಯದಲ್ಲಿಆತಿಥೇಯರ ಪರವಾಗಿ ಕಣಕ್ಕೆ ಇಳಿದವರು ವಿಯೆಟ್ನಾಂ ಆಟಗಾರ್ತಿ ವು ಥಿ ತ್ರಾಂಗ್‌. ಎದುರಾಳಿಯಾಗಿದ್ದವರು ಶ್ರೇಯಾಂಸಿ ಪರ್ದೇಶಿ. ತಾಳ್ಮೆಯ ಆಟವಾಡಿದ ವು ಥಿ, 15–4, 11–15, 15–7ರಿಂದ ಗೆದ್ದರು. ಇದು ರ‍್ಯಾಪ್ಟರ್ಸ್‌ನ ಟ್ರಂಪ್ ಪಂದ್ಯವಾಗಿದ್ದುದರಿಂದ ಎರಡು ಪಾಯಿಂಟ್‌ಗಳು ಬಗಲಿಗೆ ಬಿದ್ದವು.

ADVERTISEMENT

ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ ವಿಯೆಟ್ನಾಂ ಆಟಗಾರ್ತಿ ಮೊದಲ ವಿರಾಮಕ್ಕೆ ತೆರಳುವಾಗ 8–1ರಿಂದ ಮುನ್ನಡೆದರು. ಕೇವಲ ನಾಲ್ಕು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಮೊದಲ ಗೇಮ್‌ನಲ್ಲಿ ಜಯ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಅವರಿಗೆ ಭಾರಿ ಪೈಪೋಟಿ ಎದುರಾಯಿತು. ಡ್ರಾಪ್ ಶಾಟ್‌ ತಂತ್ರದಲ್ಲಿ ಯಶಸ್ವಿಯಾದ ಶ್ರೇಯಾಂಸಿ ಗೇಮ್ ಗೆದ್ದು ಮುಂಬೈ ಪಾಳಯದಲ್ಲಿ ಭರವಸೆ ಮೂಡಿಸಿದರು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ವು ಥಿ ಅಬ್ಬರಿಸಿದರು. ಬಲಶಾಲಿ ಸ್ಮ್ಯಾಷ್‌ಗಳನ್ನು ಸಿಡಿಸಿದ ಅವರು ಶ್ರೇಯಾಂಸಿಯನ್ನು ದಂಗುಬಡಿಸಿದರು.

ಎರಡನೇ ಪಂದ್ಯ ಪುರುಷರ ಡಬಲ್ಸ್‌. ರ‍್ಯಾಪ್ಟರ್ಸ್ ಪರ ಕಣಕ್ಕೆ ಇಳಿದ ಹೇಂದ್ರ ಸತ್ಯವಾನ್ ಮತ್ತು ಮೊಹಮ್ಮದ್ ಅಹ್ಸಾನ್‌ 15–11, 15–11ರಿಂದ ಕಿಮ್‌ ಜಿ ಜಂಗ್ ಮತ್ತು ಯಾಂಗ್‌ ಡೀ ಲೀ ಜೋಡಿಯನ್ನು ಮಣಿಸಿದರು.

ಶ್ರೀಕಾಂತ್ ಅಜೇಯ ಓಟ:ಲೀಗ್‌ನಲ್ಲಿ ಈ ಬಾರಿ ಒಂದು ಪಂದ್ಯದಲ್ಲೂ ಸೋಲದ ಕಿದಂಬಿ ಶ್ರೀಕಾಂತ್ ಇಲ್ಲೂ ಗೆಲುವಿನ ಓಟ ಮುಂದುವರಿಸಿದರು. ಆ್ಯಂಡರ್ಸ್‌ ಆ್ಯಂಟನ್‌ಸೆನ್‌ ಎದುರಿನ ಪಂದ್ಯದಲ್ಲಿ ಅವರು ತವರಿನ ಪ್ರೇಕ್ಷಕರನ್ನು ರಂಜಿಸಿದರು. ಸ್ಮ್ಯಾಷ್‌, ಕ್ರಾಸ್ ಕೋರ್ಟ್ ಶಾಟ್ ಮತ್ತು ಡ್ರಾಪ್ ಶಾಟ್‌ಗಳ ಮೂಲಕ ಮನ ಸೆಳೆದ ಅವರು 15–14, 15–13ರಿಂದ ಗೆದ್ದರು.

ಪಂದ್ಯದ ಎರಡನೇ ಗೇಮ್‌ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಗೇಮ್‌ನ ಮೊದಲಾರ್ಧದಲ್ಲಿ ಶ್ರೀಕಾಂತ್‌ 8–7ರಿಂದ ಮುಂದಿದ್ದರು. ದ್ವಿತೀಯಾರ್ಧದಲ್ಲಿ ಎದುರಾಳಿ ಪಟ್ಟು ಬಿಡಲಿಲ್ಲ. 11–11, 12–12, 13–13ರಲ್ಲಿ ಗೇಮ್‌ ಸಮಬಲವಾಗಿದ್ದಾಗ ಪ್ರೇಕ್ಷಕರು ಉಸಿರು ಬಿಗಿಹಿಡಿದು ಕುಳಿತರು. ಈ ಸಂದರ್ಭದಲ್ಲಿ ಆ್ಯಂಟನ್‌ಸೆನ್‌ ಷಟಲ್‌ ಅನ್ನು ನೆಟ್ ಮೇಲೆ ಹಾಕಿ ಪಾಯಿಂಟ್ ಕಳೆದುಕೊಂಡರು. ನಂತರ ಶ್ರೀಕಾಂತ್‌ ಹಾದಿ ಸುಗಮವಾಯಿತು.

ಸಾಯಿ ಪ್ರಣೀತ್‌– ಸಮೀರ್ ವರ್ಮಾ ಹಣಾಹಣಿ: ರಾಕೆಟ್ಸ್‌ ಟ್ರಂಪ್ ಪಂದ್ಯದಲ್ಲಿ ಕಣಕ್ಕಿಳಿಸಿದ್ದು ಸಮೀರ್ ವರ್ಮಾ ಅವರನ್ನು. ಎದುರಾಳಿಯಾಗಿದ್ದದ್ದು ಸಾಯಿ ಪ್ರಣೀತ್‌. ರೋಚಕ ಹಣಾಹಣಿಯಲ್ಲಿ ಸಮೀರ್ 15–12, 5–15, 13–15ರಲ್ಲಿ ಸೋತರು. ಕ್ಲೀನ್ ಸ್ವೀಪ್‌ ಕನಸಿನೊಂದಿಗೆ ಆಡಲು ಇಳಿದ ರ‍್ಯಾಪ್ಟರ್ಸ್‌ನ ಮಾರ್ಕಸ್ ಎಲಿಸ್ ಮತ್ತು ಲಾರೆನ್ ಸ್ಮಿತ್‌ ಫಲ ಕಾಣಲಿಲ್ಲ. ಜೆಬಾದಿಯಾ ಬೆರ್ನಾದೆತ್‌ ಮತ್ತು ಕಿಮ್‌ ಜಿ ಜಂಗ್ ಜೋಡಿ ಎದುರಿನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಬೆಂಗಳೂರು ಜೋಡಿ 14–15, 13–15ರಿಂದ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.