ADVERTISEMENT

ಯೂತ್ ಬಾಕ್ಸಿಂಗ್‌: ಚಿನ್ನ ಗೆದ್ದ ರವೀನಾ

ಭಾರತದ ಮಡಿಲಿಗೆ ಒಟ್ಟು11 ಪದಕ

ಪಿಟಿಐ
Published 27 ನವೆಂಬರ್ 2022, 13:03 IST
Last Updated 27 ನವೆಂಬರ್ 2022, 13:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಹಾಲಿ ಏಷ್ಯಾ ಚಾಂಪಿಯನ್‌ ರವೀನಾ ಅವರು ವಿಶ್ವ ಯೂತ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತ ಒಟ್ಟು 11 ಪದಕಗಳನ್ನು ತನ್ನದಾಗಿಸಿಕೊಂಡಿತು.

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಭಾನುವಾರ ಮಹಿಳೆಯರ 63 ಕೆಜಿ ವಿಭಾಗದ ಫೈನಲ್‌ನಲ್ಲಿ ರವೀನಾ ನೆದರ್ಲೆಂಡ್ಸ್‌ನ ಮೇಗನ್‌ ಡಿಕ್ಲೆರ್ ಅವರನ್ನು ಪರಾಭವಗೊಳಿಸಿದರು.

ಜಿದ್ದಾಜಿದ್ದಿ ಬೌಟ್‌ನಲ್ಲಿ ಉತ್ತಮ ಆರಂಭ ಪಡೆಯದಿದ್ದರೂ, ತಾಂತ್ರಿಕ ಸಾಮರ್ಥ್ಯ ಮತ್ತು ಬಿರುಸಿನ ಪಂಚ್‌ಗಳ ಮೂಲಕ ರವೀನಾ4–3ರಿಂದ ಗೆಲುವು ಒಲಿಸಿಕೊಂಡರು.

ADVERTISEMENT

ಇನ್ನೊಂದು ಫೈನಲ್‌ ಬೌಟ್‌ನಲ್ಲಿ ಕೀರ್ತಿ (81+ ಕೆಜಿ) 0–5ರಿಂದ ಯೂರೋಪಿಯನ್‌ ಯೂತ್ ಚಾಂಪಿಯನ್‌, ಐರ್ಲೆಂಡ್‌ನ ಕ್ಲಿಯೊನಾ ಎಲಿಜಬೆತ್‌ ಡಿ ಆರ್ಕಿ ಎದುರು ಸೋತು ಬೆಳ್ಳಿ ಗಳಿಸಿದರು.

ಭಾರತದ ಒಟ್ಟು 17 ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್ ತಲುಪಿದ್ದರು.

ಈ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ 73 ದೇಶಗಳ 600 ಬಾಕ್ಸರ್‌ಗಳು ಪಾಲ್ಗೊಂಡಿದ್ದರು.

ಪದಕ ಜಯಿಸಿದ ಭಾರತದ ಬಾಕ್ಸರ್‌ಗಳು: ಮಹಿಳೆಯರು: ಚಿನ್ನ: ರವೀನಾ (63 ಕೆಜಿ), ದೇವಿಕಾ ಘೋರ್ಪಡೆ (52 ಕೆಜಿ). ಬೆಳ್ಳಿ: ಕೃತಿ (81+ ಕೆಜಿ), ಭಾವನಾ ಶರ್ಮಾ (48 ಕೆಜಿ). ಕಂಚು: ಮುಸ್ಕಾನ್‌ (75 ಕೆಜಿ), ಲಾಶು ಯಾದವ್‌ (70 ಕೆಜಿ), ಕುಂಜರಾಣಿ ದೇವಿ (60 ಕೆಜಿ), ತಮನ್ನಾ (50 ಕೆಜಿ).

ಪುರುಷರು: ಚಿನ್ನ: ವಂಶಜ್‌ (63.5 ಕೆಜಿ), ವಿಶ್ವನಾಥ್ ಸುರೇಶ್ (48 ಕೆಜಿ). ಬೆಳ್ಳಿ: ಆಶಿಶ್‌ (54 ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.