ADVERTISEMENT

ಬ್ಯಾಡ್ಮಿಂಟನ್‌ನ ಉಜ್ವಲ ಭರವಸೆ ರುಜುಲಾ

ಬಸವರಾಜ ದಳವಾಯಿ
Published 2 ಸೆಪ್ಟೆಂಬರ್ 2022, 19:30 IST
Last Updated 2 ಸೆಪ್ಟೆಂಬರ್ 2022, 19:30 IST
ರುಜುಲಾ ರಾಮು– ಪ್ರಜಾವಾಣಿ ಚಿತ್ರ
ರುಜುಲಾ ರಾಮು– ಪ್ರಜಾವಾಣಿ ಚಿತ್ರ   

ಇತ್ತೀಚೆಗೆ ನಡೆದ ಚೊಚ್ಚಲ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಬಿರುಸಿನ ಸ್ಮ್ಯಾಷ್‌ ಮತ್ತು ಚುರುಕಿನ ಪಾದಚಲನೆ ಮೂಲಕ ಗಮನಸೆಳೆದ ಆಟಗಾರ್ತಿ ರುಜುಲಾ ರಾಮು.

ಎಳವೆಯಲ್ಲಿಯೇ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭರವಸೆ ಮೂಡಿಸಿರುವ ಬೆಂಗಳೂರಿನ ಪ್ರತಿಭೆ ರುಜುಲಾ, ಇಲ್ಲಿನ ಸೋಫಿಯಾ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ. ಏಳನೇ ವಯಸ್ಸಿನಲ್ಲಿಯೇ ಈ ಕ್ರೀಡೆಯ ಆಸಕ್ತಿ ಬೆಳೆಸಿಕೊಂಡವರು. ಸದ್ಯ 17 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ರಾಜ್ಯದ ಆಟಗಾರ್ತಿಯಾಗಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ರುಜಲಾ ಅವರಿಗೆ ಚಾಂಪಿಯನ್ ಪಟ್ಟ ಒಲಿದಿತ್ತು. ವಯಸ್ಸಿಗೂ ಮೀರಿದ ಆಟವಾಡಿದ್ದ ಅವರು ಪ್ರಮುಖ ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿದ್ದರು. ಅದೇ ಟೂರ್ನಿಯ 19 ವರ್ಷದೊಳಗಿನವರ ವಿಭಾಗದಲ್ಲಿ ರನ್ನರ್ಸ್ಅಪ್ ಕೂಡ ಆಗಿದ್ದರು.

ADVERTISEMENT

17 ವರ್ಷದೊಳಗಿನವರ ವಿಭಾಗದಲ್ಲಿ ಅಖಿಲ ಭಾರತ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ರುಜುಲಾ ಮುಡಿಗೆ ಹಲವು ಪದಕಗಳ ಗರಿ ಸೇರಿವೆ. 2019ರಲ್ಲಿ ನಡೆದ 13 ವರ್ಷದೊಳಗಿನವರ ವಿಭಾಗದ ಎಲ್ಲ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟ ಅವರದಾಗಿದೆ. ಅದೇ ವರ್ಷ ರಾಜ್ಯ ಜೂನಿಯರ್ ಚಾಂಪಿಯನ್‌ಷಿಪ್‌ನ ಮೂರು ವಿಭಾಗಗಳಲ್ಲಿ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು.

ಇದೇ ವರ್ಷ ಚಂಡೀಗಡದಲ್ಲಿ ನಡೆದ 17 ವರ್ಷದೊಳಗಿನವರ ವಿಭಾಗದ ರಾಷ್ಟ್ರೀಯ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಅವರ ಸಾಧನೆಗಳಲ್ಲೊಂದು.

ರುಜುಲಾ ಇದುವರೆಗೆಓಪನ್ ವಿಭಾಗಗಳು ಸೇರಿ 50ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳ ಜಯಿಸುವ ಗುರಿಯಿಟ್ಟುಕೊಂಡಿರುವ ಅವರು, ಸ್ಪೇನ್‌ನ ಕರೋಲಿನಾ ಮರಿನ್‌ ತನ್ನ ನೆಚ್ಚಿನ ಆಟಗಾರ್ತಿ ಎನ್ನುತ್ತಾರೆ.

‘ಬೆಳಿಗ್ಗೆ 6.30ಕ್ಕೆ ಅಭ್ಯಾಸ ಆರಂಭಿಸುತ್ತೇನೆ. ಈ ವೇಳೆ ಒಂದೂವರೆ ತಾಸು ತಾಲೀಮು ನಡೆಸುತ್ತೇನೆ. ಒಂದಷ್ಟು ಹೊತ್ತು ಫಿಟ್‌ನೆಸ್‌ಗಾಗಿಯೂ ಮೀಸಲಿಡುತ್ತೇನೆ. ಶಾಲೆಗೆ ಹೋಗಿ ಬಂದ ಬಳಿಕ ಮತ್ತೆರಡು ತಾಸು ಅಭ್ಯಾಸದ ಅಂಗಣದಲ್ಲಿ ಬೆವರು ಹರಿಸುತ್ತೇನೆ‘ ಎಂದು ರುಜುಲಾ ಹೇಳುತ್ತಾರೆ.ಪಟೇಲ್ಸ್‌ ಇನ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಅವರಿಗೆ ಮೋಹನ್ ಕುಮಾರ್ ಕೋಚ್‌ ಆಗಿದ್ದಾರೆ.

‘ಸದ್ಯಕ್ಕೆ ರಾಷ್ಟ್ರೀಯ ಟೂರ್ನಿಗಳತ್ತ ಹೆಚ್ಚಿನ ಗಮನಹರಿಸುತ್ತೇನೆ. ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ತಂದೆ ರಾಮು ಮತ್ತು ತಾಯಿಲೀಲಾ ಪ್ರೋತ್ಸಾಹ ಅಪಾರವಾಗಿದೆ. ನನ್ನ ಎಲ್ಲ ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿದ್ದಾರೆ. ವಿಕಾಸ್ ಅಣ್ಣ, ಲಚ್ಚಿ (ಲಕ್ಷ್ಮಣ್‌) ದೊಡ್ಡಪ್ಪ ಮತ್ತು ಶಕು ದೊಡ್ಡಮ್ಮ ನನ್ನ ಕನಸುಗಳ ಸಾಕಾರಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ‘ ಎಂದು ರುಜುಲಾ ಮೆಚ್ಚುಗೆಯ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.