ADVERTISEMENT

ತೆಲಂಗಾಣದ ಸಾಯಿ ಅಗ್ನಿ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:41 IST
Last Updated 31 ಜನವರಿ 2026, 15:41 IST
ಸಾಯಿ ಅಗ್ನಿ ಜೀವಿತೇಶ್
ಸಾಯಿ ಅಗ್ನಿ ಜೀವಿತೇಶ್   

ಬೆಳ್ತಂಗಡಿ (ದಕ್ಷಿಣ ಕನ್ನಡ): ತೆಲಂಗಾಣದ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳ ಅಮೋಘ ಆಟಕ್ಕೆ ಸಾಕ್ಷಿಯಾದ ‘ಎಸ್‌ಡಿಎಂ–ಆರ್‌ಸಿಸಿ ರೋಟೊ ಲಾಯರ್ಸ್‌’ ಫಿಡೆ ರೇಟೆಡ್‌ ಅಂತರರಾಷ್ಟ್ರೀಯ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಸಾಯಿ ಅಗ್ನಿ ಜೀವಿತೇಶ್ ಮುನ್ನಡೆ ಕಾಯ್ದುಕೊಂಡರು.

ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರಿನ ರಾವ್ಸ್ ಚೆಸ್ ಕಾರ್ನರ್ ಇಲ್ಲಿನ ಎಸ್‌ಡಿಎಂ ಕಲಾಭವನದಲ್ಲಿ ಆಯೋಜಿಸಿರುವ ಟೂರ್ನಿಯ ಎಂಟು ಸುತ್ತುಗಳ ಅಂತ್ಯಕ್ಕೆ ಸಾಯಿ ಅಗ್ನಿ, ಐಎಂ ಚ‌ಕ್ರವರ್ತಿ ರೆಡ್ಡಿ, ತೆಲಂಗಾಣದ ಭಾವನ್‌ ಕೊಲ್ಲ ಮತ್ತು ಆಂಧ್ರಪ್ರದೇಶದ ಮಣಿ ಭಾರತಿ ತಲಾ 7 ಪಾಯಿಂಟ್ಸ್‌ ಗಳಿಸಿದ್ದಾರೆ. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಸಾಯಿ ಅಗ್ನಿ ಅಗ್ರಸ್ಥಾನದಲ್ಲಿದ್ದಾರೆ. 

ಕರ್ನಾಟಕದ ಲಕ್ಷಿತ್ ಸಾಲಿಯಾನ್‌, ಸ್ವರ ಲಕ್ಷ್ಮಿ ನಾಯರ್ ಮತ್ತು ತಮಿಳುನಾಡಿನ ಕೇಶವನ್ ಜಿ ತಲಾ 6.5 ಪಾಯಿಂಟ್ ಗಳಿಸಿದ್ದು 10 ಮಂದಿ 6 ಪಾಯಿಂಟ್‌ಗಳೊಂದಿಗೆ ಭರವಸೆಯಲ್ಲಿದ್ದಾರೆ. 

ADVERTISEMENT

ಅಗ್ರ ಶ್ರೇಯಾಂಕದ ಚಕ್ರವರ್ತಿ ನಾಲ್ಕನೇ ಸುತ್ತಿನವರೆಗೆ ಜಯ ಗಳಿಸಿದ್ದರು. 5ನೇ ಸುತ್ತಿನಲ್ಲಿ ಲಕ್ಷಿತ್ ಸಾಲಿಯಾನ್ ಎದುರು ಮುಗ್ಗರಿಸಿದರು. ಮತ್ತೊಂದೆಡೆ ಎರಡನೇ ಶ್ರೇಯಾಂಕದ ಸಾಯಿ ಅಗ್ನಿ 7ನೇ ಸುತ್ತಿನ ವರೆಗೂ ಅಜೇಯರಾಗಿದ್ದರು. ಆದರೆ ದಿನದ ಕೊನೆಯ ಸುತ್ತಿನಲ್ಲಿ ಅವರನ್ನು ಮಣಿಸಿದ ಚಕ್ರವರ್ತಿ ಅಗ್ರಸ್ಥಾನದಲ್ಲಿ ಪಾಲುದಾರರಾದರು. ಭಾವನ್ ಕೊಲ್ಲ 6ನೇ ಸುತ್ತಿನಲ್ಲಿ ಲಕ್ಷಿತ್ ವಿರುದ್ಧ ಜಯ ಗಳಿಸಿದರು. 8ನೇ ಸುತ್ತಿನಲ್ಲಿ ಲಕ್ಷಿತ್‌ ಜೊತೆ ಕೇಶವನ್‌ ಡ್ರಾ ಮಾಡಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.