ADVERTISEMENT

ಅಮೆರಿಕದಲ್ಲಿ ತರಬೇತಿ ಪಡೆಯಲು ವೇಟ್‌ಲಿಫ್ಟರ್‌ ಮೀರಾಬಾಯಿಗೆ ಅನುಮತಿ

ಪಿಟಿಐ
Published 29 ಸೆಪ್ಟೆಂಬರ್ 2020, 14:14 IST
Last Updated 29 ಸೆಪ್ಟೆಂಬರ್ 2020, 14:14 IST
ಮೀರಾಬಾಯಿ ಚಾನು–ಪಿಟಿಐ ಚಿತ್ರ
ಮೀರಾಬಾಯಿ ಚಾನು–ಪಿಟಿಐ ಚಿತ್ರ   

ನವದೆಹಲಿ: ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ಅಮೆರಿಕದಲ್ಲಿ ತರಬೇತಿ ಪಡೆಯಲು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಮಿಷನ್‌ ಒಲಿಂಪಿಕ್‌ ಸೆಲ್‌ (ಎಂಒಸಿ) ಅನುಮತಿ ನೀಡಿದೆ. ಅಮೆರಿಕದ ಕನ್ಸಾಸ್‌ನಲ್ಲಿ ಮೀರಾ ತರಬೇತಿ ಪಡೆಯಲಿದ್ದು, ಇದಕ್ಕಾಗಿ ಸಾಯ್‌ ₹ 40 ಲಕ್ಷ ವೆಚ್ಚ ಮಾಡಲಿದೆ.

ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯ (ಟಾಪ್ಸ್) ಭಾಗವಾಗಿ ಆರು ಕ್ರೀಡೆಗಳಿಗೆ (ಶೂಟಿಂಗ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಪ್ಯಾರಾ ಸ್ಪೋರ್ಟ್ಸ್, ವೇಟ್‌ಲಿಫ್ಟಿಂಗ್‌ ಹಾಗೂ ಹಾಕಿ) ₹ 1.5 ಕೋಟಿ ಆರ್ಥಿಕ ನೆರವಿನ ಪ್ರಸ್ತಾಪದ ಕುರಿತು ಆನ್‌ಲೈನ್‌ ಸಭೆ ಸೋಮವಾರ ನಡೆದಿತ್ತು. ಈ ಸಭೆಯಲ್ಲಿ ಮೀರಾಬಾಯಿ ಅವರ ತರಬೇತಿ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ಅಮೆರಿಕದಲ್ಲಿ ತರಬೇತಿ ಪಡೆಯಲು ಮೀರಾಬಾಯಿ ಅವರು ಸಲ್ಲಿಸಿದ್ದ ₹ 40 ಲಕ್ಷ ಧನಸಹಾಯ ಪ್ರಸ್ತಾಪಕ್ಕೆ ಸಮಿತಿ ಅಂಗೀಕಾರ ನೀಡಿದೆ. ಎರಡು ತಿಂಗಳು ಕನ್ಸಾಸ್‌ನಲ್ಲಿ ಅವರು ತಮ್ಮ ಕೋಚ್‌ ಹಾಗೂ ಫಿಸಿಯೊ ಅವರೊಂದಿಗೆ ತರಬೇತಿ ನಡೆಸಲಿದ್ದಾರೆ‘ ಎಂದು ಸಾಯ್‌ ಹೇಳಿದೆ.

ADVERTISEMENT

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ತಮ್ಮ ಮನೆಯ ವ್ಯಾಪ್ತಿಯಲ್ಲಿ ಶೂಟಿಂಗ್‌ ಪರಿಕರಗಳನ್ನು ಸಂಗ್ರಹಿಸಿಕೊಳ್ಳಲು ಶೂಟರ್‌ಗಳು ಸಲ್ಲಿಸಿದ್ದ ಪ್ರಸ್ತಾವವನ್ನೂ ಸಾಯ್‌ನ ಸಮಿತಿ ಅನುಮೋದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.