ADVERTISEMENT

ಸೈನಾ, ಶ್ರೀಕಾಂತ್‌ಗೆ ಜಯದ ಆರಂಭ

ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಜಯರಾಮ್ ಪರಾಭವ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 13:59 IST
Last Updated 24 ಮಾರ್ಚ್ 2021, 13:59 IST
ಕಿದಂಬಿ ಶ್ರೀಕಾಂತ್ –ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್ –ಎಎಫ್‌ಪಿ ಚಿತ್ರ   

ಪ್ಯಾರಿಸ್‌ (ಪಿಟಿಐ): ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಭಾರತದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಅವರು ಆರ್ಲಿಯನ್ಸ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಸೈನಾ, ಬುಧವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ 21–9, 21–5ರಿಂದ ಐರ್ಲೆಂಡ್‌ನ ರಚೆಲ್‌ ಡಾರ್ರಾಗ್ ಅವರನ್ನು ಪರಾಭವಗೊಳಿಸಿದರು. ನಾಲ್ಕನೇ ಬಾರಿ ಒಲಿಂಪಿಕ್ಸ್‌ಗೆ ಪ್ರವೇಶ ಗಿಟ್ಟಿಸುವ ಯತ್ನದಲ್ಲಿರುವ ಅವರು ಇಲ್ಲಿ ರ‍್ಯಾಂಕಿಂಗ್ ಪಾಯಿಂಟ್ಸ್ ಕಲೆಹಾಕುವತ್ತ ಚಿತ್ತ ನೆಟ್ಟಿದ್ದಾರೆ. ಸೈನಾ ಅವರಿಗೆ ಈ ಪಂದ್ಯ ಗೆಲ್ಲಲು ಕೇವಲ 21 ನಿಮಿಷಗಳು ಸಾಕಾದವು.

ಮುಂದಿನ ಹಣಾಹಣಿಯಲ್ಲಿ ಅವರು ಫ್ರಾನ್ಸ್‌ನ ಮ್ಯಾರಿ ಬಾಟೊಮೀನ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಶ್ರೀಕಾಂತ್, ಎರಡನೇ ಸುತ್ತಿನ ಪಂದ್ಯದಲ್ಲಿ 21-15, 21-10ರಿಂದ ಸಹ ಆಟಗಾರ ಅಜಯ್ ಜಯರಾಮ್ ಅವರನ್ನು ಸೋಲಿಸಿದರು. ಮೊದಲ ಪಂದ್ಯದಲ್ಲಿ ಅವರಿಗೆ ಬೈ ಲಭಿಸಿತ್ತು.

ಮೊದಲ ಸುತ್ತಿನ ಸೆಣಸಾಟದಲ್ಲಿ ಜಯರಾಮ್‌ 19–21, 23-21, 21-16ರಿಂದ ಭಾರತದವರೇ ಆದ ಆಲಾಪ್ ಮಿಶ್ರಾ ಅವರನ್ನು ಸೋಲಿಸಿದ್ದರು.

ಮಿಶ್ರ ವಿಭಾಗದಲ್ಲಿ ಪ್ರಣವ್ ಜೆರಿ ಚೋಪ್ರಾ–ಎನ್‌. ಸಿಕ್ಕಿ ರೆಡ್ಡಿ ಜೋಡಿಯು 21-7 21-18ರಿಂದ ಆಸ್ಟ್ರಿಯಾದ ಡಾಮಿನಿಕ್ ಸ್ಟಿಪ್‌ಸಿಟ್ಸ್–ಸೆರೆನಾ ವು ಯೊಂಗ್ ಜೋಡಿಯನ್ನು ಮಣಿಸಿ ಮುನ್ನಡೆದರು. ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ ಡೆನ್ಮಾರ್ಕ್‌ನ ನಿಕ್ಲಾಸ್‌ ನೊಹರ್–ಅಮಾಲಿ ಮೆಗಲಂಡ್ ಅವರನ್ನು ಎದುರಿಸುವರು.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಕಿರಣ್ ಜಾರ್ಜ್‌ 13-21 21-18 22-20ರಿಂದ ನೆದರ್ಲೆಂಡ್ಸ್‌ನ ಮಾರ್ಕ್ ಕ್ಯಾಲಿವ್‌ಗೆ ಆಘಾತ ನೀಡಿದ್ದರು. ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಕ್ಯಾಲಿವ್ ಸೆಮಿಫೈನಲ್ ತಲುಪಿದ್ದರು.

ಮಿಥುನ್ ಮಂಜುನಾಥ್ 21-14, 21-10ರಿಂದ ಫ್ರಾನ್ಸ್‌ನ ಲೂಕಾಸ್‌ ಕ್ಲೀರ್‌ಬೌಟ್‌ ಎದುರು ಗೆದ್ದರೆ, ಶುಭಾಂಕರ್ ಡೇ 17–21, 13–21ರಿಂದ ಡೆನ್ಮಾರ್ಕ್‌ನ ಡಿಟ್ಲೇ ಜೀಗರ್ ಹೊಮ್‌ ಎದುರು ಸೋಲು ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.