ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಂದಕ್ಕೆ

ಪಿಟಿಐ
Published 7 ಮೇ 2021, 13:23 IST
Last Updated 7 ಮೇ 2021, 13:23 IST
ಕಿಬಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ
ಕಿಬಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ   

ನವದೆಹಲಿ:ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಕೊನೆಯ ಎರಡು ಟೂರ್ನಿಗಳಲ್ಲಿ ಒಂದಾಗಿದ್ದ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ಅನ್ನು ಕೋವಿಡ್‌ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇದರಿಂದಾಗಿ ಟೋಕಿಯೊ ಟಿಕೆಟ್ ಕನಸು ಹೊತ್ತಿರುವ ಭಾರತದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಸುಮಾರು ₹ 4 ಕೋಟಿ ನಲವತ್ತು ಲಕ್ಷ ಬಹುಮಾನ ಮೊತ್ತದ ಟೂರ್ನಿಯು ಕ್ವಾಲಾಲಂಪುರದಲ್ಲಿ ಇದೇ 25ರಿಂದ 30ರವರೆಗೆ ನಿಗದಿಯಾಗಿತ್ತು.

‘ಟೂರ್ನಿಗೆ ಸುರಕ್ಷಿತ ವಾತಾವರಣದಲ್ಲಿ ಕಲ್ಪಿಸಲು ಸಂಘಟಕರು ಹಾಗೂ ನಮ್ಮ ಫೆಡರೇಷನ್‌ ಎಲ್ಲ ಪ್ರಯತ್ನಗಳನ್ನು ಮಾಡಿದ್ದವು. ಆದರೆ ಕೋವಿಡ್ ಪ್ರಕರಣಗಳಲ್ಲಿ ಇತ್ತೀಚೆಗೆ ಕಂಡುಬಂದ ಏರಿಕೆಯ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡದೇ ಬೇರೆ ದಾರಿಯಿರಲಿಲ್ಲ‘ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಒಲಿಂಪಿಕ್ಸ್‌ಗೆ ನಿಗದಿಪಡಿಸಿದ ಅರ್ಹತಾ ಅವಧಿಯೊಳಗೆ ಟೂರ್ನಿ ನಡೆಯುವುದಿಲ್ಲ. ಮುಂದಿನ ವೇಳಾಪಟ್ಟಿಯನ್ನು ಶೀಘ್ರ ನಿಗದಿಪಡಿಸಲಾಗುವುದು‘ ಎಂದು ಬಿಡಬ್ಲ್ಯುಎಫ್‌ ಹೇಳಿದೆ.

ಮೇ 11ರಿಂದ 16ರವರೆಗೆ ನಡೆಯಬೇಕಿದ್ದ ಇಂಡಿಯಾ ಓಪನ್ ಟೂರ್ನಿಯನ್ನು ಮುಂದೂಡಲಾಗಿತ್ತು. ಈಗ ಮಲೇಷ್ಯಾ ಓಪನ್ ಸರದಿ. ಸೈನಾ ಹಾಗೂ ಶ್ರೀಕಾಂತ್‌ ಇನ್ನು ಜೂನ್‌ ಒಂದರಿಂದ ಆರರವರೆಗೆ ನಿಗದಿಯಾಗಿರುವ ಸಿಂಗಪುರ ಓಪನ್‌ನಲ್ಲಿ ಅದೃಷ್ಟ ಪರೀಕ್ಷಿಸಬೇಕಿದೆ.

ಈ ಬೆಳವಣಿಗೆ ಕುರಿತು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ), ಬಿಡಬ್ಲ್ಯುಎಫ್‌ಅನ್ನು ಸಂಪರ್ಕಿಸಿದ್ದು, ತನ್ನ ಬ್ಯಾಡ್ಮಿಂಟನ್ ಪಟುಗಳ ಅರ್ಹತಾ ಸ್ಥಿತಿಯ ಕುರಿತು ಸ್ಷಷ್ಟತೆ ನೀಡುವಂತೆ ಕೋರಿದೆ.

‘ನಿರ್ಣಾಯಕವಾಗಿದ್ದ ಅರ್ಹತಾ ಟೂರ್ನಿಯು ಮುಂದೂಡಿಕೆಯಾಗಿದ್ದು ದುರದೃಷ್ಟಕರ. ಆದರೆ ಅಂತಹ ಸ್ಥಿತಿಯಲ್ಲೇ ನಾವಿದ್ದೇವೆ. ನಮ್ಮ ನಾಲ್ವರು ಆಟಗಾರರು ಈಗಾಗಲೇ ಒಲಿಂಪಿಕ್ಸ್ ಟಿಕೆಟ್ ಗಳಿಸಿದ್ದಾರೆ. ಸೈನಾ, ಶ್ರೀಕಾಂತ್ ಸೇರಿದಂತೆ ಇನ್ನೂ ಕೆಲವರು ಅರ್ಹತೆಯ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಮುಂದಿನ ಕ್ರಮಗಳ ಬಗ್ಗೆ ಬಿಡಬ್ಲ್ಯುಎಫ್ ಕಾರ್ಯದರ್ಶಿ ಥಾಮಸ್ ಲುಂಡ್ ಅವರ ಜೊತೆ ಚರ್ಚೆ ನಡೆಸಿದ್ದೇನೆ‘ ಎಂದು ಬಿಎಐ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.

ಭಾರತದಿಂದ ಬರುವ ಎಲ್ಲ ವಿಮಾನಗಳಿಗೆ,ಸಿಂಗಪುರ ಕೋವಿಡ್‌ ಕಾರಣದಿಂದ ನಿರ್ಬಂಧ ಹೇರಿದೆ. ಹೀಗಾಗಿಸೈನಾ, ಶ್ರೀಕಾಂತ್ ಸೇರಿದಂತೆ ಭಾರತದ ಆಟಗಾರರಿಗೆ ಕೊನೆಯ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸುವುದೂ ಕಷ್ಟಕರ ಎನಿಸಲಿದೆ.

‘ಮಾರ್ಗಸೂಚಿಗಳ ಅನ್ವಯ ಭಾರತದ ವ್ಯಕ್ತಿಗಳು ಸಿಂಗಪುರ ಪ್ರವೇಶಿಸುವ ಮುನ್ನ, ಭಾರತ ಹೊರತುಪಡಿಸಿ ಇತರ ಯಾವುದೇ ದೇಶದಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ‘ ಎಂದು ಬಿಎಐ ಈ ಮೊದಲು ಹೇಳಿತ್ತು.

‘ಅದಕ್ಕೆ ಪರ್ಯಾಯವಾಗಿ ಎಲ್ಲ ಆಟಗಾರರು ಸಿಂಗಪುರದಲ್ಲೇ 21 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಬೇಕಾಗುತ್ತದೆ‘ ಎಂದು ಬಿಎಐ ಹೇಳಿದೆ.

‘ಭಾರತದ ಆಟಗಾರರು ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸುವ ಅವಕಾಶ, ಸಾಧ್ಯತೆಗಳ ಕುರಿತು ಸೂಕ್ತ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು‘ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.